

ರಬಕವಿ-ಬನಹಟ್ಟಿ: ರಾಜ್ಯದಲ್ಲಿರುವ ಶೋಷಿತ ಸಮುದಾಯಗಳು ಮತ್ತು ದುರ್ಬಲ ವರ್ಗದ ಜನತೆಯ ಮೂಲ ಕಸುಬಾದ ಕುರಿಗಾಹಿಗಳ ಹಿತರಕ್ಷಣಾ ಕಾಯ್ದೆ ರೂಪಿಸಿ ಅದನ್ನು ತಕ್ಷಣ ಅನುಷ್ಠಾನಗೊಳಿಸಿ ಭದ್ರತೆ ಒದಗಿಸಬೇಕು ಎಂದು ಕುರುಬ ಸಮಾಜದ ಮುಖಂಡ ಭರಮು ತುಂಗಳ ಆಗ್ರಹಿಸಿದರು.
ತಾಲೂಕು ಕುರಿಗಾಹಿಗಳ ಹಿತರಕ್ಷಣಾ ಸಮಿತಿ ಕುರಿಗಳ ಸಮೇತ ಸೋಮವಾರ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾಡಿದ ಅವರು, ಅರಣ್ಯ ಇಲಾಖೆ ಸೇರಿ ಇತರ ಜಾಗಗಳಲ್ಲಿ ಕುರಿಗಾಹಿಗಳನ್ನು ತಡೆದು ಅಧಿಕಾರಿಗಳು ದರ್ಪ ಮೆರೆಯುತ್ತಿದ್ದಾರೆ. ಪಾರಂಪರಿಕ ಕುರಿಗಾಹಿಗಳ ಹಿತರಕ್ಷಣೆಗೆ ಸರ್ಕಾರ ಮುಂದಾಗದಿದ್ದಲ್ಲಿ ರಾಜ್ಯಾದ್ಯಂತ ಸಮಾಜದ ಸರ್ವ ಸದಸ್ಯರು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕುಲಕಸಬು ಮುಂದುವರಿಸಲು ಬೆಟ್ಟ-ಗುಡ್ಡಗಳಲ್ಲಿ ಮತ್ತು ಆಯಾ ಪ್ರದೇಶಾನುಸಾರ ಸಂಚಾರಿ ಕುರಿಗಾಹಿಗಳ ಪರ್ಯಾಟನೆ ನಿರಂತರವಾಗಿರುತ್ತದೆ. ಗುಡ್ಡಗಾಡು ಪ್ರದೇಶಗಳ ಕುರಿಗಾಹಿಗಳಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಕುರಿ ಮಂದೆ ಮೇಯಿಸಲು ಅರಣ್ಯ ಇಲಾಖೆ ಸೇರಿ ಇತರ ಅಧಿಕಾರಿಗಳ ಅಟ್ಟಹಾಸ ಮೇರೆ ಮೀರಿದೆ. ಇದನ್ನು ತಡೆಗಟ್ಟಲು ಸರ್ಕಾರ ಕಠಿಣ ಕಾನೂನು ರೂಪಿಸಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಬನಹಟ್ಟಿಯ ಶ್ರೀ ಈಶ್ವರಲಿಂಗ ಮೈದಾನದಿಂದ ಕುರಿ ಹಿಂಡಿನೊಂದಿಗೆ ಪ್ರತಿಭಟನಾ ಮೆರವಣಿಗೆ ಎಂ.ಎಂ. ಬಂಗ್ಲೆ, ಎಸ್‌ಟಿಸಿ ಕಾಲೇಜು, ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಮೂಲಕ ಸಾಗಿ ತಹಸೀಲ್ದಾರ್ ಕಚೇರಿಗೆ ತಲುಪಿತು.
ತಾಲೂಕು ಕಚೇರಿ ಆವರಣದಲ್ಲಿ ಕುರಿ ಮಂದೆ ಪ್ರವೇಶಕ್ಕೆ ಅವಕಾಶ ನಿರಾಕರಿಸಿದ ಸಿಪಿಐ ಸಂಜೀವ ಬಳಿಗಾರ, ಪಿಎಸ್‌ಐ ಶಾಂತಾ ಹಳ್ಳಿ ಜತೆಗೆ ಒಂದು ಗಂಟೆಗೂ ಹೆಚ್ಚು ಸಮಯ ಯಲ್ಲಪ್ಪ ಕಟಗಿ, ಮಲ್ಲಪ್ಪ ಸಿಂಗಾಡಿ, ಯಲ್ಲಪ್ಪ ಹ್ಯಾಗಾಡಿ ವಾಗ್ವಾದ ನಡೆಸಿದರು. ಕೊನೆಗೆ ಡಿವೈಎಸ್ಪಿ ರೋಶನ್ ಜಮೀರ ಸ್ಥಳಕ್ಕಾಗಮಿಸಿ ತಹಸೀಲ್ದಾರ್ ಗಿರೀಶ ಸ್ವಾದಿ ಜತೆಗೆ ಮಾತುಕತೆ ನಡೆಸಿದ ಬಳಿಕ ಅನುಮತಿಸಲಾಯಿತು.
ಧುರೀಣರಾದ ರಂಗನಗೌಡ ಪಾಟೀಲ, ಅರ್ಜುನ ಜಿಡ್ಡಿಮನಿ, ಯಲ್ಲಪ್ಪ ಹ್ಯಾಗಾಡಿ, ಹೊನ್ನಪ್ಪ ಬಿರಡಿ, ಶಿವಗೊಂಡ ಸನದಿ ಮಾತನಾಡಿ, ಪಾರಂಪರಿಕ ಕುರಿಗಾಹಿಗಳ ರಕ್ಷಣೆಗೆ ಕಾನೂನು ರಚಿಸಿ ತಕ್ಷಣ ಜಾರಿಗೊಳಿಸುವ ಮೂಲಕ ಕುರಿಗಾಹಿಗಳ ಹಿತ ಕಾಯಲು ಆಗ್ರಹಿಸಿದರು.
ತಹಸೀಲ್ದಾರ್ ಗಿರೀಶ ಸ್ವಾದಿ ಸಮಸ್ಯೆ ಬಹೆಗರಿಸುವ ಭರವಸೆ ನೀಡಿದರು.
ತಾಲೂಕು ಪಶು ವೈದ್ಯಾಧಿಕಾರಿ ಬಸವರಾಜ ಗೌಡರ, ಪ್ರಭು ಪೂಜಾರಿ, ಸಂಜು ಹಾಡಕರ, ಪ್ರಕಾಶ ಮುಧೋಳ, ಮಾಳು ಹಿಪ್ಪರಗಿ, ಮಲ್ಲಿಕಾರ್ಜುನ ವಂದಾಲ, ಪರಪ್ಪ ಆಲಕನೂರ, ಭೀಮಶಿ ಹಿರೇಕುರುಬರ, ಶಂಕರ ಆಲಕನೂರ ಇದ್ದರು.