

ಶಿರಸಿ: ರಾಜ್ಯದ ಪಶ್ಚಿಮ ಘಟ್ಟದಲ್ಲಿ 153.8 ಚ.ಕಿಮೀ ಅರಣ್ಯ ಕಳೆದ 10 ವರ್ಷಗಳಲ್ಲಿ ನಾಶ ಆಗಿದೆ ಎಂದು ಭಾರತ ಸರ್ಕಾರದ ಭಾರತೀಯ ಅರಣ್ಯ ಸಮೀಕ್ಷಾ ವರದಿ ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ನಾಶ ಆಗದಂತೆ ತಡೆಗಟ್ಟಲು ಕೈಗೊಳ್ಳಬೇಕಾದ ತುರ್ತು ಕ್ರಮಗಳು, ಪ್ರಚಲಿತ ಸ್ಥಿತಿಗತಿ ಬಗ್ಗೆ ವೃಕ್ಷಲಕ್ಷ ಆಂದೋಲನದ ತಜ್ಞರ ತಂಡ ವಿಶೇಷ ವರದಿ, ಶಿಫಾರಸನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಸಲ್ಲಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ವೃಕ್ಷ ಲಕ್ಷ ಆಂದೋಲನ ಅಧ್ಯಕ್ಷ ಅನಂತ ಅಶೀಸರ, ಸುಸ್ಥಿರ, ಜನ ಸಹಭಾಗಿತ್ವದ ಪಶ್ಚಿಮ ಘಟ್ಟದ ಅರಣ್ಯ ಸಂರಕ್ಷಣಾ ಯೋಜನೆ ರೂಪಿಸಿ ಜಾರಿ ಮಾಡಬೇಕು.
2025-26 ರಲ್ಲಿ ಹಸಿರು ಬಜೆಟ್, ಮಂಡಿಸಬೇಕು. ಕಾನು ಅರಣ್ಯ ಸಂರಕ್ಷಣೆ ಅಭಿವೃಧಿ್ಧ ಯೋಜನೆ ಜಾರಿ ಮಾಡಬೇಕು. ಅರಣ್ಯ ಇಲಾಖೆಯನ್ನು ಚುರುಕುಗೊಳಿಸಲು ಮುಂದಾಗಬೇಕು ಎಂದು ಶಿಫಾರಸು ಮಾಡಲಾಗಿದೆ. ಮಲೆನಾಡಿನಲ್ಲಿ ಕಾನು, ಬೆಟ್ಟ, ಸೊಪ್ಪಿಗೆ ಮುಫತ್ತು, ಗೋಚರ, ಕಾಫಿಕಾನು ಮುಂತಾದ ಹೆಸರಲ್ಲಿ ಒಂದು ಲಕ್ಷ ಎಕರೆಗಿಂತ ಹೆಚ್ಚು ಕಂದಾಯ ಅರಣ್ಯಗಳಿವೆ. ಡೀಮ್ಡ ಅರಣ್ಯ ಪಟ್ಟಿಯಲ್ಲಿ ಇವುಗಳ ಅರ್ಧಭಾಗ ಸೇರಿದೆ. ಪಾರಂಪರಿಕವಾಗಿ ಹಳ್ಳಿಗಳ ಜನರೇ ಈ ಕಾನು ಅರಣ್ಯಗಳ ನಿರ್ವಹಣೆ ಮಾಡುತ್ತಿದ್ದರು. ಆದರೆ ಕಳೆದ 30 ವರ್ಷಗಳಲ್ಲಿ ಕೃಷಿ ಒತ್ತುವರಿ ಜಾಸ್ತಿಯಾಗಿ ಕಂದಾಯ ಅರಣ್ಯಗಳು ವಿನಾಶದ ಹಂತಕ್ಕೆ ಬಂದವು. ಪಶ್ಚಿಮ ಘಟ್ಟ ಕಾರ್ಯಪಡೆ- ಅರಣ್ಯ ಇಲಾಖೆ 2010 ರಿಂದ 2013 ರ ವರೆಗೆ ಕಾನು ಸಂರಕ್ಷಣೆ ಅಭಿವೃದ್ಧಿ ಯೋಜನೆ ಜಾರಿ ಮಾಡಿತು. ಸುಮಾರು 120 ಹಳ್ಳಿಗಳ 20000 ಎಕರೆ ಕಂದಾಯ ಅರಣ್ಯಗಳಿಗೆ ರಕ್ಷಣಾ ಕವಚ ಸಿಕ್ಕಿತು. ಗ್ರಾಮ ಜನರ ಸಹಕಾರ ಸಿಕ್ಕಿತ್ತು. 2015 ರ ನಂತರ ಕಾನು ಅರಣ್ಯ ಅಭಿವೃದ್ಧಿ ಯೋಜನೆಗೆ ಅನುದಾನವನ್ನೇ ಅರಣ್ಯ ಇಲಾಖೆ ನೀಡಲಿಲ್ಲ! ಇದರಿಂದಾಗಿ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಇರುವ ಕಾನು ಅರಣ್ಯಗಳ ನಾಶ ಪುನಃ ಹೆಚ್ಚಾಯಿತು ಎಂದು ವಿಶ್ಲೇಷಿಸಲಾಗಿದೆ.
ಕಂದಾಯ ಕಾನು ಅರಣ್ಯ ರಕ್ಷಣೆಗೆ ರಾಜ್ಯ ಕಂದಾಯ ಹಾಗೂ ಅರಣ್ಯ ಇಲಾಖೆ ಕಾರ್ಯದರ್ಶಿಗಳು ಜಂಟಿ ಸಭೆ-ಸ್ಥಳ ಭೇಟಿ ಮಾಡಬೇಕು. ನಿಗದಿತ ಪರಿಶಿಲನಾ ಸಭೆ ನಡೆಸಬೇಕು. ಹಳ್ಳಿಗಳಲ್ಲಿ ಗ್ರಾಮ ಅರಣ್ಯ ಸಮೀತಿ ರಚಿಸಬೇಕು. ಜಿಲ್ಲಾ ಸಾಮಾಜಿಕ ಅರಣ್ಯ ವಿಭಾಗ, ಪಂಚಾಯಿತಿ ಜೀವ ವೈವಿಧ್ಯ ಸಮಿತಿಗಳಿಗೆ ಜೀವ ತುಂಬಬೇಕು. ಪಶ್ಚಿಮ ಘಟ್ಟದ ಅರಣ್ಯಗಳ ರಕ್ಷಣೆ ಬಗ್ಗೆ ಚಳಿಗಾಲದ ವಿಧಾನ ಸಭಾ ಅಧಿವೇಶನದಲ್ಲಿ ಒಂದು ದಿನ ಸಮಯ ಮೀಸಲು ಇಡಬೇಕು. ಬಜೆಟ್ನಲ್ಲಿ ವಿಶೇಷ ಅನುದಾನ ನೀಡಲು ಸರ್ಕಾರ ಅರಣ್ಯ ಸಚಿವರು ಮುಂದಾಗಬೇಕು ಎಂದು ಒತ್ತಾಯ ಮಾಡಲಾಗಿದೆ.
ಅರಣ್ಯ ಭವನದ ಉನ್ನತ ಅಧಿಕಾರಿಗಳಿಗೆ ಶಿವಮೊಗ್ಗ ಸೇರಿದಂತೆ ಪಶ್ಚಿಮ ಘಟ್ಟದ ಸೂಕ್ಷ್ಮ ಅರಣ್ಯ ವಿಭಾಗಗಳ ರಕ್ಷಣಾ ಜವಾಬ್ದಾರಿ ನೀಡಬೇಕು. ಉನ್ನತ ಅಧಿಕಾರಿಗಳು ಘಟ್ಟ ಪ್ರದೇಶಕ್ಕೆ ಭೇಟಿ ನೀಡಬೇಕು. ಕರಾವಳಿ ಹಸಿರು ಕವಚ ಯೋಜನೆ ಕಾರವಾರ ಗ್ರೀನ್ ಬೆಲ್ಟ ಯೋಜನೆ, ಶಿವಮೊಗ್ಗ ಕಾನು ಅಭಿವೃದ್ಧಿ ಯೋಜನೆ, ಉ.ಕ ಜಿಲ್ಲೆಯ ಬೆಟ್ಟ ಅಭಿವೃದ್ಧಿ ಯೋಜನೆ, ಹಾಸನ-ತುಮಕೂರಿನ ಅಮೃತ ಮಹಲ್ ಕಾವಲ್ ರಕ್ಷಣಾ ಯೋಜನೆ, ಔಷಧಿ ಮೂಲಿಕೆಗಳ ಸಂರಕ್ಷಿತ ಪ್ರದೇಶ ರಕ್ಷಣಾ ಯೋಜನೆಗಳನ್ನು ಪುನಃ ಜಾರಿಗೊಳಿಸಲು ಹಕ್ಕೊತ್ತಾಯದ ಮನವಿ ಮಾಡಲಾಗಿದೆ.