

ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಡಿ.24 ರಿಂದ 31ರ ವರೆಗೆ ನಡೆಯಲಿರುವ ಯಲ್ಲಮ್ಮ ದೇವಿ ಜಾತ್ರೆಯಲ್ಲಿ ದೇವಾಲಯದ ಮುಂಭಾಗ, ಸುತ್ತಮುತ್ತಲಿನ ಪರಿಸರ ಹಾಗೂ ಸಾರ್ವಜನಿಕ ಧಾರ್ಮಿಕ ಸಮಾವೇಶದಲ್ಲಿ ಯಾವುದೇ ಪ್ರಾಣಿಗಳ ಬಲಿ ನಡೆಯದಂತೆ ಪ್ರಾಣಿ ಅಂಗಾಗಗಳ ನೈವೇದ್ಯ ಸಲ್ಲಿಕೆ, ಪ್ರದರ್ಶನ ಇತ್ಯಾದಿ ಕಾನೂನು ಬಾಹಿರ ಕತ್ಯಗಳು ಜರುಗದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು ಎಂದು ಪಶು ಪ್ರಾಣಿ ಬಲಿ ನಿರ್ಮೂಲನ ಜಾಗತಿ ಮಹಾ ಸಂಘದ ಅಧ್ಯಕ್ಷ ದಯಾನಂದ ಸ್ವಾಮೀಜಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ. ಪ್ರಾಣಿ ಬಲಿಯು ಅನಾಗರಿಕವು ಅಂಧಶ್ರದ್ಧೆಯೂ, ಪರಿಸರ ಮಾಲಿನ್ಯಕಾರಕ, ಇದು ಕಾನೂನು ಮತ್ತು ಧರ್ಮ ವಿರೋಧಿ ಆಗಿದೆ. ಆದ್ದರಿಂದ ಭಕ್ತಾದಿಗಳು ಪ್ರಾಣಿಬಲಿ ತ್ಯಜಿಸಿ ಅಹಿಂಸಾತ್ಮಕವಾಗಿ ಸಾತ್ವಿಕ ಪೂಜೆ ಸಲ್ಲಿಸಬೇಕು ಎಂದು ಸ್ವಾಮೀಜಿ ಭಕ್ತರಲ್ಲಿ ವಿನಂತಿಸಿದ್ದಾರೆ. ದೇವಾಲಯ ಆವರಣವು ಪ್ರಾಣಿಹಿಂಸೆ ಮತ್ತು ಮಧ್ಯ, ಮಾದಕ ಪದಾರ್ಥಗಳಿಂದ ಮುಕ್ತವಾಗಿರಬೇಕು, ಅಹಿಂಸೆ ಕರುಣೆ, ಪ್ರೇಮ, ಜೀವದಯೆ, ಮಾನವೀಯತೆ, ಆಧ್ಯಾತ್ಮಿಕತೆ ಮುಂತಾದ ದಿವ್ಯ ಮೌಲ್ಯಗಳನ್ನು ಸಾರುವ ಸುಸಂಸ್ಕಾರ ನೀಡುವ ದಿವ್ಯ ಧಾಮಗಳಾಗಬೇಕು. ಈ ನಿಟ್ಟಿನಲ್ಲಿ ಭಕ್ತಾದಿಗಳು, ಸಮಾಜ, ದೇವಾಲಯದ ಆಡಳಿತ ಮಂಡಳಿ ಹಾಗೂ ಸರ್ಕಾರ ಕಾರ್ಯ ನಿರ್ವಹಿಸಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಸಿದ್ದಾರೆ.