

ಮೈಸೂರು: ಪ್ರತಿಯೊಂದು ಜೀವವೂ ಅಮೂಲ್ಯವಾದದ್ದು. ಉತ್ತಮ ರಸ್ತೆಗಳು, ಸಂಚಾರ ನಿಯಮಗಳು ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅಪಘಾತದಿಂದ ಸಾವು-ನೋವು ಆಗದಂತೆ ತಡೆಗಟ್ಟಲು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಮ್ಮ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೈಸೂರು ನಗರದಲ್ಲಿ ವಿಶಾಲವಾದ ರಸ್ತೆಗಳು ಇವೆ. ಆದರೆ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ. ಇತ್ತೀಚೆಗೆ ಮೈಸೂರು ವಿಶ್ವವಿದ್ಯಾಲಯ ಬಳಿಯ ಜೆಸಿ ಕಾಲೇಜು ರಸ್ತೆ ಹಾಗೂ ಬೋಗಾದಿ ರಸ್ತೆಯಲ್ಲಿ ಅವೈಜ್ಞಾನಿಕ ಹಂಪ್ ಅಳವಡಿಸುವುದರಿಂದ ಅಪಘಾತ ಸಂಭವಿಸಿ 3 ಜನ ಬಲಿಯಾಗಿದ್ದಾರೆ. ಈ ಅವೈಜ್ಞಾನಿಕ ಹಂಪ್ಸ್ ಅಳವಡಿಸಿ ಅವಘಡಕ್ಕೆ ಕಾರಣರಾದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದರು.
ರಸ್ತೆಗಳನ್ನು ದುರಸ್ತಿ ಹಾಗೂ ಕಾಮಗಾರಿ ನಡೆಸುವಾಗ ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ರಸ್ತೆ ವೈಟ್ ಟ್ಯಾಪ್, ಸೂಚನಾ ಫಲಕಗಳನ್ನು ಹಾಕಬೇಕು. ಬದಲಿ ರಸ್ತೆ ಬಳಕೆ ಕುರಿತು ಮಾಹಿತಿ ನೀಡಬೇಕು ಎಂದು ನಿರ್ದೇಶನ ನೀಡಿದರು.
ಮೈಸೂರು ಪ್ರವಾಸೋದ್ಯಮಕ್ಕೆ ಹೆಸರಾದ ಜಿಲ್ಲೆ. ಯಾವ ಪ್ರವಾಸಿ ತಾಣಗಳಿಗೆ ಯಾವ ರಸ್ತೆಯಲ್ಲಿ ಹೋಗಬೇಕು ಎಂಬ ಸೈನ್ ಬೋರ್ಡ್‌ಗಳನ್ನು ಅಳವಡಿಸಬೇಕು. ಇದರಿಂದ ಪ್ರವಾಸಿಗರಿಗೆ ಸೂಕ್ತ ಮಾಹಿತಿ ದೊರೆಯುತ್ತದೆ. ಫುಟ್‌ಪಾತ್‌ಗಳ ಮೇಲೆ ಬೀದಿಬದಿ ವ್ಯಾಪಾರಿಗಳು ಅತಿಕ್ರಮ ಮಾಡಿರುತ್ತಾರೆ. ಇದನ್ನು ತೆರವುಗೊಳಿಸಿ ಜನ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.
ಅಪಾಯಕಾರಿ ಮರಗಳು ಹಾಗೂ ಕೊಂಬೆಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಗೆ ವರದಿ ನೀಡಿ. ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಅಗತ್ಯವಿರುವೆಡೆ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಕ್ರಮ ವಹಿಸಬೇಕು. ನಗರದಲ್ಲಿರುವ ಅವೈಜ್ಞಾನಿಕ ಹಂಪ್‌ಗಳ ಕುರಿತು ಸ್ಧಳ ಪರಿಶೀಲನೆ ಮಾಡಿ ವರದಿ ತಯಾರಿಸಿ ವಾರದಲ್ಲಿ ನೀಡಬೇಕು ಎಂದು ಪೊಲೀಸ್ ಇಲಾಖೆಗೆ ತಾಕೀತು ಮಾಡಿದರು.
ಮೈಸೂರು ಗ್ರಾಮಾಂತರದಲ್ಲಿ ಜನವರಿ ತಿಂಗಳಲ್ಲಿ 16 ಜನರು ಅಪಘಾತ ಪ್ರಕರಣಗಳಿಂದ ಮರಣ ಹೊಂದಿದ್ದಾರೆ. ಈ ಅಪಘಾತಗಳು ಸಂಭವಿಸಲು ಕಾರಣಗಳು ಏನು ಎಂಬುವುದರ ಬಗ್ಗೆ ವರದಿ ನೀಡಬೇಕು. ಶಿವರಾಂಪೇಟೆ ಸರ್ಕಲ್ನಲ್ಲಿ ಗೂಡ್ಸ್ ವಾಹನಗಳನ್ನು ರಸ್ತೆಬದಿಯಲ್ಲೇ ನಿಲ್ಲಿಸಿಕೊಂಡು ಲೋಡಿಂಗ್ ಅನ್ ಲೋಡಿಂಗ್ ಮಾಡುತ್ತಾ ಇರುತ್ತಾರೆ. ಇದರಿಂದ ಅಲ್ಲಿ ಟ್ರಾಫಿಕ್ ಜಾಮ್ ಆಗಿ ವಿಳಂಬ ಆಗುತ್ತದೆ. ಈ ಸಮಯವನ್ನು ಸರಿದೂಗಿಸಲು ವಾಹನ ಸವಾರರು ಮುಂದಿನ ಸಿಗ್ನಲ್ಗಳಿಂದ ವೇಗವಾಗಿ ಚಾಲನೆ ಮಾಡುತ್ತಾರೆ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ. ಆದ್ದರಿಂದ ಶಿವರಾಂಪೇಟೆ ಸರ್ಕಲ್ನಲ್ಲಿ ಪೀಕ್ ಸಮಯದಲ್ಲಿ ಗೂಡ್ಸ್ ವಾಹನಗಳನ್ನು ನಿಲ್ಲಿಸದಂತೆ ಕ್ರಮ ವಹಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೆಲ್ಮೆಟ್ ಧರಿಸದೆ ಇರುವವರು ಹಾಗೂ ಸಂಚಾರ ನಿಯಮಗಳನ್ನು ಪಾಲಿಸದೆ ಇರುವವರಿಗೆ ದಂಡ ವಿಧಿಸಿ. ಅವೈಜ್ಞಾನಿಕ ಹಂಪ್‌ಗಳನ್ನು ತೆರವುಗೊಳಿಸಿ. ಆಟೋ ಚಾಲಕರು, ಗೂಡ್ಸ್ ವಾಹನಗಳ ಚಾಲಕರು, ಬಸ್ ಚಾಲಕರು ಇವರಿಗೆ ನಿಯಮಿತವಾಗಿ ಕಾರ್ಯಾಗಾರಗಳನ್ನು ಮಾಡಿ ಸುರಕ್ಷತಾ ಚಾಲನಾ ನಿಯಮಗಳ ಕುರಿತು ತರಬೇತಿ ನೀಡಬೇಕು ಎಂದು ತಾಕೀತು ಮಾಡಿದರು.