

ಸಂಡೂರು: ತಾಲೂಕು ಸರ್ಕಾರಿ ಶಾಲೆ ಶಿಕ್ಷಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ಡಿಡಿಪಿಐ ಕಚೇರಿಯ ಶಿಕ್ಷಣಾಧಿಕಾರಿ ಸಿದ್ದಲಿಂಗ ಮೂರ್ತಿ ಸೂಚಿಸಿದರು.
ಪಟ್ಟಣದ ಬಿಇಒ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಶಿಕ್ಷಣ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಹೊಸದಾಗಿ ನೇಮಕವಾದ ಶಿಕ್ಷಕರಿಗೆ ಕಳೆದ ನವೆಂಬರ್‌ನಿಂದ ಮಾರ್ಚ್‌ವರೆಗಿನ ವೇತನ ಪಾವತಿಯಾಗಿಲ್ಲ. ಈ ಕುರಿತು ಸರ್ಕಾರದ ಮಟ್ಟದಲ್ಲೇ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು. ವೇತನ ಬಡ್ತಿ ಕಾಲಕಾಲಕ್ಕೆ ನಿಗದಿಪಡಿಸಬೇಕು. ಸೇವಾವಹಿ ಪುಸ್ತಕಗಳಲ್ಲಿ ದಾಖಲಿಸಬೇಕು ಎಂದು ತಿಳಿಸಿದರು.
ಬಿಇಒ ಡಾ.ಐ.ಆರ್.ಅಕ್ಕಿ ಮಾತನಾಡಿ, ಬಾಕಿ ವೇತನ ಸೇರಿದಂತೆ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅದಾಲತ್‌ನಲ್ಲಿ ಸಲ್ಲಿಕೆಯಾದ 30 ಅರ್ಜಿಗಳ ಪೈಕಿ ಹತ್ತು ಅಹವಾಲುಗಳನ್ನು ಸ್ಥಳದಲ್ಲಿಯೇ ಪರಿಹರಿಸಲಾಯಿತು. ಉಳಿದ ಅರ್ಜಿಗಳ ವಿಲೇವಾರಿಗೆ 15 ದಿನ ಗಡುವು ನೀಡಲಾಯಿತು.
ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿದ್ದಣ್ಣ ಳವಾರ, ಅಕ್ಷರ ದಾಸೋಹ ಎಡಿ ಶ್ರೀಧರ ಮೂರ್ತಿ, ಪತ್ರಾಂಕಿತ ಸಹಾಯಕ ಚಂದ್ರಕಾಂತ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ತಮ್ಮಪ್ಪ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬಂಗಿ ನಾಗರಾಜ, ಜಿಪಿಟಿ ಶಿಕ್ಷಕರ ಸಂಘದ ಅಧ್ಯಕ್ಷ ಶಶಿಧರ್, ಭಾರತಿ ಇತರರಿದ್ದರು.