

ನರೇಗಲ್ಲ: ಪಟ್ಟಣದಲ್ಲಿ ಹಾಯ್ದು ಹೋಗಿರುವ ಕೈಗಾ-ಇಲಕಲ್ಲ ರಾಜ್ಯ ಹೆದ್ದಾರಿಯಲ್ಲಿನ ರಸ್ತೆ ಸೂಚನಾ ಫಲಕವು ಅನಾಥವಾಗಿ ನೆಲಕ್ಕೆ ಬಿದ್ದು ತಿಂಗಳುಗಳೆ ಕಳೆದಿದ್ದು, ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ, ರಸ್ತೆಯಲ್ಲಿ ಸಾಗುವ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.
ಪಟ್ಟಣದ ಹಳೇ ಬಸ್ ನಿಲ್ದಾಣದ ಹತ್ತಿರದಲ್ಲಿ ಹಾಕಲಾಗಿದ್ದ ರಸ್ತೆ ಸೂಚನಾ ಫಲಕವು ಬಿದ್ದಿರುವ ಬಗ್ಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ನಾಮಫಲಕವು ಹಳೇ ಬಸ್ ನಿಲ್ದಾಣ ಹತ್ತಿರವಿದ್ದು, ಇಲ್ಲಿಂದ ಗಜೇಂದ್ರಗಡ ಮಾರ್ಗಕ್ಕೆ ಒಂದು ರಸ್ತೆ ಹಾಗೂ ಕುಕನೂರ ಮಾರ್ಗಕ್ಕೆ ಒಂದು ರಸ್ತೆ ಹಾಯ್ದು ಹೋಗಿದೆ. ಹೊಸದಾಗಿ ಬರುವ ವಾಹನ ಸವಾರರಿಗೆ ಯಾವ ಮಾರ್ಗದ ಕಡೆಗೆ ಹೋಗಬೇಕು ಎಂಬುದು ತಿಳಿಯದೇ ರಸ್ತೆಯಲ್ಲಿನ ಜನರನ್ನು ವಿಚಾರಿಸುತ್ತಿದ್ದಾರೆ. ಆದ್ದರಿಂದ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿ ರಸ್ತೆ ಸೂಚನಾ ಫಲಕ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ನರೇಗಲ್ಲ ನಿವಾಸಿ ಚೇತನ ಬೊಮ್ಮನಹಳ್ಳಿ ಹಾಗೂ ಇತರರು ಒತ್ತಾಯಿಸಿದ್ದಾರೆ.