

ರಾಯಚೂರು: ಲೋಕಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣೆ ಭಾಗವಹಿಸುವಿಕೆ ಕಾರ್ಯ ಚಟುವಟಿಕೆಗಳನ್ನು ಚುರುಕುಗೊಳಿಸಬೇಕು ಎಂದು ಜಿ.ಪಂ. ಸಿಇಒ ರಾಹುಲ್ ತುಕಾರಾಮ್ ಪಾಂಡ್ವೆ ತಿಳಿಸಿದರು.
ಸ್ಥಳೀಯ ಜಲ ನಿರ್ಮಲ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸ್ಪೀಪ್ ಕೋರ್ ಕಮಿಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದಿನ ಚುನಾವಣೆಯಲ್ಲಿ ಕಡಿಮೆ ಮತದಾನ ಆದ ಮತಗಟ್ಟೆಗಳನ್ನು ಗುರುತಿಸಿ ಆ ಮತಗಟ್ಟೆ ವ್ಯಾಪ್ತಿಯಲ್ಲಿ ಹೆಚ್ಚಿನ ಮಟ್ಟದಲ್ಲಿ ಸ್ಪೀಪ್ ಚಟುವಟಿಕೆ ನಡೆಸಬೇಕು ಎಂದರು.
ಮತದಾನ ಪ್ರಮಾಣ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಆಯಾ ಇಲಾಖೆಯ ಅಕಾರಿಗಳು ಹೆಚ್ಚಿನ ಶ್ರಮ ವಹಿಸಿ ಕಾರ್ಯನಿರ್ವಹಿಸಬೇಕು. ವಿನೂತನವಾದ ಜಾಗೃತಿ ಕಾರ್ಯಕ್ರಮ ನಡೆಸಿ ಮತದಾನದ ಮಹತ್ವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು.
ಜಿಲ್ಲೆಯ ಕಾಲೇಜುಗಳಲ್ಲಿ, ನರೇಗಾ ಕೂಲಿ ಕಾರ್ಮಿಕರಲ್ಲಿ, ಸಾರ್ವಜನಿಕ ಪ್ರದೇಶಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಬೇಕು. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲರೂ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು ಎಂದು ರಾಹುಲ್ ತುಕಾರಾಮ್ ಪಾಂಡ್ವೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸ್ವೀಪ್ ನೋಡಲ್ ಅಕಾರಿ ಡಾ.ಬಿ.ವೈ.ವಾಲ್ಮೀಕಿ, ಕೆಕೆಎಸ್‌ಆರ್‌ಟಿ ಎಂ.ಎಸ್.ಚಂದ್ರಶೇಖರ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಆರ್.ದೇವಿಕಾ, ಪಿಯು ಡಿಡಿಪಿಐ ಸೋಮಶೇಖರಪ್ಪ ಹೊಕ್ರಾಣಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಕಾರಿ ಶರಣಪ್ಪ ಪಾಟೀಲ್, ಜಿಲ್ಲಾ ಕಾರ್ಮಿಕ ಅಕಾರಿ ಆರತಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ರವಿ ಉಪಸ್ಥಿತರಿದ್ದರು.