

ಚಿಕ್ಕಮಗಳೂರು: ಕಳೆದ ಚುನಾವಣೆಯಲ್ಲಿ ಕಡಿಮೆ ಮತದಾನವಾದ ಮತಗಟ್ಟೆಗಳನ್ನು ಗುರುತಿಸಿ ವಿಭಾಗವಾರು ಆಯ್ಕೆ ಮಾಡಿ ಸ್ವೀಪ್ ಸಮಿತಿಯಿಂದ ಕ್ರಿಯಾತ್ಮಕ ಚಟುವಟಿಕೆ ಕೈಗೊಂಡು 2024ರ ಲೋಕಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಪಂ ಸಭಾಂಗಣದಲ್ಲಿ ನಡೆದ ಸ್ವೀಪ್ ಕಾರ್ಯಚಟುವಟಿಕೆಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಸ್ವೀಪ್ ಸಮಿತಿಯಿಂದ ವಿವಿಧ ಕಾರ್ಯಕ್ರಮ ಹಮ್ಮಿಕೊಂಡು ವಿಶೇಷ ಚೇತನರು, ದುರ್ಬಲ ವರ್ಗದ ಮತದಾರರನ್ನು ವಿಶೇಷ ಆಸಕ್ತಿ ವಹಿಸಿ ಮತದಾರರ ಪಟ್ಟಿಯಲ್ಲಿ ಸೇರಿಸಬೇಕು ಎಂದು ಹೇಳಿದರು.
ಮತದಾನ ಪ್ರಮಾಣ ಹೆಚ್ಚಿಸಲು ಮುಂಚಿತವಾಗಿ ಕ್ರಿಯಾಯೋಜನೆ ರೂಪಿಸಿ, ಜಾಗೃತಿ ಮೂಡಿಸಬೇಕು. ವಿದ್ಯಾರ್ಥಿಗಳಲ್ಲಿ ಚುನಾವಣೆ ಮತ್ತು ಮತದಾನ ಕುರಿತು ಅರಿವು ಮೂಡಿಸಲು ವಿವಿಧ ಶಾಲಾ, ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ರಾಷ್ಟ್ರೀಯ ಮತದಾನ ದಿನದ ಅಂಗವಾಗಿ ವಿವಿಧ ಪ್ರಬಂಧ ಸ್ಪರ್ಧೆ, ಅಣಕು ಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮ ಆಯೋಜಿಸಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.