ಮತದಾನ ಹೆಚ್ಚಳಕ್ಕೆ ಕ್ರಮ ವಹಿಸಿ

28adarshkdga6
Published on

ಮಡಿಕೇರಿ: ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರ ವಾಪ್ತಿಯಲ್ಲಿ ೨೦ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ೪೫ ಒಟ್ಟು ೬೫ ಮತಗಟ್ಟೆಗಳಲ್ಲಿ ಶೇ.೬೫ ಕ್ಕಿಂತ ಕಡಿಮೆ ಮತದಾನವಾಗಿದ್ದು, ಈ ಹಿನ್ನೆಲೆ ೬೫ ಮತಗಟ್ಟೆಗಳಲ್ಲಿ ಮತದಾನ ಕಡಿಮೆಯಾಗಲು ಕಾರಣವೇನು ಮತ್ತು ಮತದಾನ ಹೆಚ್ಚಳಕ್ಕೆ ಯಾವ ರೀತಿಯ ಕ್ರಮವಹಿಸಬಹುದು ಎಂಬುದರ ಕುರಿತು ಮಾ.೪ ರೊಳಗೆ ನಿಖರ ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಸೂಚಿಸಿದರು.


ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸ್ವೀಪ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಮಡಿಕೇರಿ ನಗರಸಭೆ, ವಿರಾಜಪೇಟೆ ಪಟ್ಟಣ ಪಂಚಾಯಿತಿ, ಕುಶಾಲನಗರ ಹಾಗೂ ಜಿಲ್ಲೆಯ ಗಡಿ ಪ್ರದೇಶದಲ್ಲಿ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಡಿಮೆ ಮತದಾನವಾಗಿದೆ. ಆದ್ದರಿಂದ ಕಡಿಮೆ ಮತದಾನವಾಗಲು ಕಾರಣ ಮತ್ತು ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಮತದಾನವಾಗಲು ಯಾವ ರೀತಿ ಕ್ರಮವಹಿಸಬಹುದು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿ ಹೇಳಿದರು.


ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಸರಾಸರಿ ಶೇ.೭೫ ರಷ್ಟು ಮತದಾನವಾಗಿದೆ. ರಾಜ್ಯದ ಸರಾಸರಿ ಶೇ.೭೨ ರಷ್ಟು ಮತದಾನವಾಗಿತ್ತು. ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಎರಡು ಕಡೆ ಹೆಸರು ಇದ್ದವರು, ವಲಸೆ ಹೋಗಿರುವವರು ಮತ್ತಿತರ ಕಾರಣದಿಂದ ಮತದಾರರ ಪಟ್ಟಿಯಿಂದ ೧೮ ಸಾವಿರ ಜನರ ಹೆಸರು ತೆಗೆಯಲಾಗಿದೆ ಎಂದು ಮಾಹಿತಿ ನೀಡಿದರು.


ಜಿಲ್ಲೆಯಲ್ಲಿ ಚಿತ್ರಕಲಾ ಶಿಬಿರ ಏರ್ಪಡಿಸುವುದು. ಗಾಳಿಪಟ ಹಾಗೂ ಬಲೂನ್ ಹಾರಿಸುವುದು. ರಂಗೋಲಿ ಸ್ಪರ್ಧೆ, ಗೀತಾ ಗಾಯನ, ಮತ್ತಿತರ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ಜಿಲ್ಲೆಯಲ್ಲಿನ ಎಲ್ಲಾ ಹೆದ್ದಾರಿ ಫಲಕಗಳಲ್ಲಿ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲೆಯ ಕಲೆ, ಸೇನೆ, ಕ್ರೀಡೆ, ಕೃಷಿ, ತೋಟಗಾರಿಕೆ ಹೀಗೆ ಹಲವು ಸ್ಥಳೀಯ ಸಂಸ್ಕೃತಿಯನ್ನು ಬಿಂಬಿಸುವ ೨೦ಕ್ಕೂ ಹೆಚ್ಚು ಮಾದರಿಯ ಹೆದ್ದಾರಿ ಫಲಕಗಳನ್ನು ಅಳವಡಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಸಲಹೆ ಮಾಡಿದರು.


ಜಿ.ಪಂ.ಸಿಇಒ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಎಸ್.ಆಕಾಶ್ ಮಾತನಾಡಿ, ಶೇ.೬೫ ಕ್ಕಿಂತ ಕಡಿಮೆ ಮತದಾನವಾಗಿರುವ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಅಧಿಕಾರಿಗಳ ತಂಡವನ್ನು ನಿಯೋಜಿಸಲಾಗುವುದು. ನಗರ, ಪಟ್ಟಣ ಪ್ರದೇಶಗಳು, ಹಾಡಿಗಳಲ್ಲಿ ಪ್ರತೀ ಭಾನುವಾರ ಮತದಾನ ಹೆಚ್ಚಳ ಸಂಬಂಧ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಬೇಕಿದೆ. ಯುವ ಮತದಾರರನ್ನು ತೊಡಗಿಸಿಕೊಂಡು ಬೇರೆ ಬೇರೆ ಕಾರ್ಯಕ್ರಮ ಆಯೋಜಿಸಬೇಕಿದೆ ಎಂದರು.


ಜಿ.ಪಂ.ಮುಖ್ಯ ಯೋಜನಾಧಿಕಾರಿ ರಾಜ್‌ಗೋಪಾಲ್, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಉಪ ನಿರ್ದೇಶಕ ರಂಗಧಾಮಯ್ಯ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪುಟ್ಟರಾಜು, ಐಟಿಡಿಪಿ ಇಲಾಖಾ ಅಧಿಕಾರಿ ಹೊನ್ನೇಗೌಡ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್, ನಗರಸಭೆ ಪೌರಾಯುಕ್ತ ವಿಜಯ, ವಿರಾಜಪೇಟೆ ತಾ.ಪಂ.ಇಒ ಅಪ್ಪಣ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net