ಕೋಟ ಆಸ್ಪತ್ರೆ ಬೆಡ್ ಹೆಚ್ಚಳಕ್ಕೆ ಕ್ರಮ, ಸಚಿವ ಶ್ರೀನಿವಾಸ ಪೂಜಾರಿ ಭರವಸೆ

Kota hospital visit
Published on

ಕೋಟ: ಹಿಂದೂ ಧರ್ಮಾದಾಯ ದತ್ತಿ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೋಮವಾರ ಕೋಟ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದರು.

ಈ ಸಂದರ್ಭ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿಶ್ವನಾಥ ಅವರೊಂದಿಗೆ ಪ್ರಸ್ತುತ ಕೋವಿಡ್‌ನಿಂದ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರಲ್ಲದೆ ಆಸ್ಪತ್ರೆಗಳಲ್ಲಿನ ಕುಂದುಕೊರತೆಗಳ ಬಗ್ಗೆ ಮಾಹಿತಿ ಪಡೆದರು.

ಮಾಧ್ಯಮದವರೊಂದಿಗೆ ಮಾತನಾಡಿ, ಪ್ರಸ್ತುತ ಕುಂದಾಪುರದಲ್ಲಿನ ಹೆರಿಗೆ ಆಸ್ಪತ್ರೆಯನ್ನು ಕೋಟ ಸಮುದಾಯ ಆರೋಗ್ಯಕ್ಕೆ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು, ಕುಂದಾಪುರ ತಾಲೂಕು ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಮಾರ್ಪಾಡುಗೊಳಿಸಲಾಗಿದೆ. ಕೋಟದಲ್ಲಿ ಬೆಡ್‌ಗಳ ಸಂಖ್ಯೆ ಹೆಚ್ಚಿಸಲು ಹಾಗೂ ಮಕ್ಕಳ ತಜ್ಞರ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗುವುದು. ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸ್ಥಳೀಯ ಪಂಚಾಯಿತಿ ಮಟ್ಟದಲ್ಲಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಪ್ರಸ್ತುತ ಆಕ್ಸಿಜನ್ ಸೇರಿದಂತೆ ಯಾವುದೇ ಕೊರತೆ ಇಲ್ಲ. ಅಂತಹ ಸಂದರ್ಭದಲ್ಲಿ ಸ್ಥಳೀಯ ಜಿಲ್ಲಾ ಆರೋಗ್ಯ ಅಧೀಕ್ಷಕರ ಮೂಲಕ ಮಾಹಿತಿ ಪಡೆದು ಬಗೆಹರಿಸಲಾಗುವುದು ಎಂದು ತಿಳಿಸಿದರು.

ಕೋಟ ಸಮುದಾಯ ಆರೋಗ್ಯ ಕೇಂದ್ರದ ಅರಿವಳಿಕೆ ತಜ್ಞ ಡಾ.ಸಂದೀಪ್ ಕುಮಾರ್ ಶೆಟ್ಟಿ, ದಂತವೈದ್ಯೆ ಡಾ.ಅನಾಲಿನಿ, ಕೋಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಜಿತ್ ದೇವಾಡಿಗ, ಉಪಾಧ್ಯಕ್ಷೆ ಜಯಂತಿ ಪೂಜಾರಿ, ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ, ಸದಸ್ಯರಾದ ಭುಜಂಗ ಗುರಿಕಾರ, ಚಂದ್ರ ಪೂಜಾರಿ, ಸಂತೋಷ್ ಪ್ರಭು, ವನಿತಾ ಶ್ರೀಧರ ಆಚಾರ್ಯ, ಗುಲಾಬಿ ಪೂಜಾರಿ, ರತ್ನರಮೇಶ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net