

ಸರಗೂರು: ಕೇರಳ ಹಾಗೂ ಎಚ್.ಡಿ.ಕೋಟೆ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗುತ್ತಿದ್ದು, ಮತ್ತಷ್ಟು ಹೊರ ಹರಿವಿನ ಪ್ರಮಾಣ ಹೆಚ್ಚಳವಾಗಬಹುದು. ಹೀಗಾಗಿ ನದಿ ಪಾತ್ರದ ಗ್ರಾಮಗಳಲ್ಲಿ ವಾಸಿಸುವ ಗ್ರಾಮಸ್ಥರು ಎಚ್ಚರಿಕೆಯಿಂದಿರಲು ಹಾಗೂ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜಾಗೃತಿ ಮೂಡಿಸಬೇಕು. ಅಗತ್ಯ ಬಿದ್ದರೆ ಸ್ಥಳಾಂತರ ಮಾಡಲು ಕ್ರಮವಹಿಸಿ ಎಂದು ಜಿಲ್ಲಾ ಪಂಚಾಯಹಿತಿ ಸಿಇಒ ಕೆ.ಎಂ.ಗಾಯತ್ರಿ ಅಧಿಕಾರಿಗಳಿಗೆ ಸೂಚಿಸಿದರು.
ಕಬಿನಿ ಜಲಾಶಯದಲ್ಲಿನ ನೀರು ಬಿಡುಗಡೆ ಗೇಟ್ ಕೊಠಡಿಯು ಸ್ವಲ್ಪ ಶಿಥಿಲಾವಸ್ಥೆಯಲ್ಲಿದ್ದು, ಕೂಡಲೇ ಕೊಠಡಿಯನ್ನು ದುರಸ್ತಿ ಮಾಡಿಸಿಕೊಳ್ಳುವಂತೆ ಹಾಗೂ ಜಲಾಶಯದ ಬಳಿ ಸಾರ್ವಜನಿಕರು ಬಾರದಂತೆ ಅಧಿಕಾರಿಗಳು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಿ ಎಂದು ಸೂಚಿಸಿದರು.
ತುಂಬುಸೋಗೆ ಸೇತುವೆ ಬಳಿ ನೀರು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಹೆಚ್ಚುವರಿ ನೀರು ಬಿಟ್ಟರೆ ಸೇತುವೆ ಮುಳುಗುವ ಭೀತಿ ಇದ್ದು, ಸಾರ್ವಜನಿಕರು ಸೇತುವೆ ಬಳಿ ತೆರಳದಂತೆ ಕ್ರಮವಹಿಸಬೇಕು ಎಂದರು.
ನುಗು ಜಲಾಶಯ ಕಬಿನಿ ಹಾಗೂ ಬಿದರಹಳ್ಳಿ ಸರ್ಕಲ್ ಬಳಿ ಇರುವ ಸೇತುವೆ ಮತ್ತು ರಸ್ತೆ ಜಲಾವೃತವಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ರೈತರು ದನ-ಕರುಗಳನ್ನು ಹೋಗದಂತೆ ಮುಂಜಾಗ್ರತೆ ವಹಿಸಬೇಕು ಎಂದು ಪೋಲೀಸ್ ಅಧಿಕಾರಿಗಳು ತಿಳಿಸಿದರು.
ಜಿಪಂ ಉಪ ಕಾರ್ಯದರ್ಶಿ(ಅಭಿವೃದ್ಧಿ) ಡಾ.ಎಂ.ಕೃಷ್ಣರಾಜು, ಸರಗೂರು ತಾಪಂ ಇಒ ಕೆ.ಸುಷ್ಮಾ, ಎಚ್.ಡಿ ಕೋಟೆ ತಾಪಂ ಇಒ ಎಸ್.ಪಿ.ಧರಣೇಶ್, ಕಾರ್ಯಪಾಲಕ ಇಂಜಿನಿಯರ್ ರಂಜಿತ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗೋವಿಂದನಾಯಕ, ಸಹಾಯಕ ನಿರ್ದೇಶಕ (ಗ್ರಾಮಾಂತರ ಉಪವಿಭಾಗ) ಮಹದೇವಸ್ವಾಮಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಪ್ರಭಾಕರ್, ಪರಮೇಶ್ ಹಾಗೂ ತಾಲೂಕು ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಇದ್ದರು.