ಜಿಲ್ಲಾ ಮಟ್ಟದ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ

17
Published on

ಮೈಸೂರು: ನಗರದ ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಮಟ್ಟದ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ಆರೋಗ್ಯ ಕೇಂದ್ರಗಳಲ್ಲಿ ಗರ್ಭಿಣಿ ದಾಖಲಾತಿ ಮತ್ತು ನೋಂದಣಿ, ಸಾಂಸ್ಥಿಕ ಹೆರಿಗೆಗಳ ನಿರ್ವಹಣೆ, ಜೆ.ಎಸ್.ವೈ ಯೋಜನೆಯಲ್ಲಿ ಅರ್ಹ ಫಲಾನುಭವಿಗಳ ಮಾಹಿತಿಯನ್ನು ಸೇವಾ ಸಿಂಧು ತಂತ್ರಾಂಶದಲ್ಲಿ ದಾಖಲಿಕರಣ ಮಾಡುವುದು. ಪಿಎಂಎಸ್‌ಎಂಎ ಮತ್ತು ಇ-ಪಿಎಂಎಸ್‌ಎಂಎ ಕಾರ್ಯಕ್ರಮದಲ್ಲಿ ಗರ್ಭಿಣಿಯರು ಮತ್ತು ಎಚ್.ಆರ್.ಪಿ. ಗರ್ಭಿಣಿಯರು ಹಾಗೂ ಬಾಣಂತಿಯರ ಆರೋಗ್ಯ ತಪಾಸಣೆ ಒಳಪಡಿಸಿರುವುದು ಮತ್ತು ಈ ಬಗ್ಗೆ ತಂತ್ರಾಂಶದಲ್ಲಿ ಇಂದೀಕರಿಸಿರುವ ಮಾಹಿತಿ, ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಪರಿಶೀಲನೆ ಲಸಿಕಾ ವಂಚಿತ ಮಕ್ಕಳ ಪಟ್ಟಿ ಮತ್ತು ಲಸಿಕೆ ಪಡೆದು ಫಲಾನುಭವಿಗಳ ಮಾಹಿತಿಯನ್ನು ಯು-ವಿನ್ ತಂತ್ರಾಂಶದಲ್ಲಿ ದಾಖಲಿಕರಣ ಮಾಡುವುದು ಹಾಗೂ ಎಂ.ಆರ್ ಲಸಿಕೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರಗತಿ ಸಾಧಿಸುವ ಮೂಲಕ ದಡಾರ-ರುಬೆಲ್ಲಾ ರೋಗ ನಿರ್ಮೂಲನೆಗೆ ಕ್ರಮವಹಿಸುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್‌ಕುಮಾರ್ ಸೂಚಿಸಿದರು.

ಕುಟುಂಬ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ಶಾಶ್ವತ ಮತ್ತು ತಾತ್ಕಾಲಿಕ ಕುಟುಂಬ ಯೋಜನೆಗಳ ಬಗ್ಗೆ ಪರಿಶೀಲಿಸಿದರು. ಸಂತಾನಹರಣ ಶಸ್ತ್ರ ಚಿಕಿತ್ಸೆ, ಪಿಪಿಐಯುಸಿಡಿ ಕಾರ್ಯಕ್ರಮಗಳು ಮತ್ತು ಕಾಯಕಲ್ಪ ಕಾರ್ಯಕ್ರಮದಡಿಯಲ್ಲಿ ಪ್ರಗತಿಯು ಕುಂಠಿತವಾಗಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಕಾಯಕಲ್ಪ ಕಾರ್ಯಕ್ರಮದಡಿಯಲ್ಲಿ ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳು ಪ್ರಶಸ್ತಿಗೆ ಭಾಜನರಾಗುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಲು ಸೂಚಿಸಿದರು.

ಹಾಗೆಯೇ ಎನ್.ಸಿ.ಡಿ ಕಾರ್ಯಕ್ರಮದಡಿಯಲ್ಲಿ ಸಿ-ಬ್ಯಾಕ್ ಕಾರ್ಯಚಟುವಟಿಕೆಯ ಸಮೀಕ್ಷೆ ಮತ್ತು ಸ್ಕ್ರೀನಿಂಗ್ ಹಾಗೂ ಎನ್.ಸಿ.ಡಿ ಕಾರ್ಯಕ್ರಮ ಫಾಲೋಆಪ್‌ಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು. ಗೃಹ ಆರೋಗ್ಯ ಕಾರ್ಯಕ್ರಮದ ಪ್ರಗತಿ ಪರಿಶೀಲನೆ ನಡೆಸಿ ಸರ್ಕಾರದ ಮಾರ್ಗಸೂಚಿ ಅನುಸಾರ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಸೂಚಿಸಲಾಯಿತು.

ಕುಷ್ಠರೋಗ ನಿರ್ಮೂಲನೆ, ಮಾನಸಿಕ ಆರೋಗ್ಯ ಮತ್ತು ಅಂಧತ್ವ ಕಾರ್ಯಕ್ರಮ ಹಾಗೂ ಎಲ್ಲ ಸಿಬ್ಬಂದಿ ಕ್ಯಾಮ್ಸ್ (ಬಯೋಮೆಟ್ರಿಕ್) ಹಾಜರಾತಿ ಪರಿಶೀಲನೆ ಮಾಡಲಾಯಿತು. ಆಯುಷ್ಮನ್ ಆರೋಗ್ಯ ಮಂದಿರಗಳಿಗೆ ನಿವೇಶನ ಗುರುತಿಸುವಿಕೆ ಇತ್ಯಾದಿ, ತಾಯಿ ಆರೋಗ್ಯ, ಮಕ್ಕಳ ಆರೋಗ್ಯ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮಗಳಲ್ಲಿ ಹಾಗೂ ಸಮುದಾಯ ಮಟ್ಟದಲ್ಲಿ ಬಾಲ್ಯ ವಿವಾಹ, ಭ್ರೂಣ ಲಿಂಗ ಪತ್ತೆ ಮತ್ತು ಪೋಕ್ಸೋ ಪ್ರಕರಣಗಳ ಬಗ್ಗೆ ನಿಗಾವಹಿಸಿ ಸೂಚಿಸಲಾಯಿತು.

ಇದೇ ವೇಳೆ ರಾಷ್ಟ್ರೀಯ ಗುಣಮಟ್ಟ ಖಾತ್ರಿ ಕಾರ್ಯಕ್ರಮದಡಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ 7 ಪ್ರಾಥಮಿಕ ಆರೋಗ್ಯ ಕೇಂದ್ರ-ಆಯುಷ್ಮನ್ ಆರೋಗ್ಯ ಮಂದಿರಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಸಂಸ್ಥೆ ನಿರ್ದೇಶಕಿ ಡಾ. ಉಮಾ ಬುಗಿ, ವಿಭಾಗೀಯ ಸಹ ನಿರ್ದೇಶಕಿ ಡಾ.ಮಲ್ಲಿಕಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ, ಪ್ರಾದೇಶಿಕ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ.ಆಶಾ, ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ.ಎಲ್.ರವಿ, ಇಲಾಖೆಯ ಎಲ್ಲ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು, ಎಲ್ಲ ತಾಲೂಕು ಆರೋಗ್ಯ ಅಧಿಕಾರಿಗಳು, ತಾಲೂಕು ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿಗಳು, ಎಲ್ಲ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು ಮತ್ತು ಆರೋಗ್ಯ ಸಿಬ್ಬಂದಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net