ಡೆಂಘೆ ನಿಯಂತ್ರಣಕ್ಕೆ ಕ್ರಮ ವಹಿಸಿ

16 vikram 7
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅಧ್ಯಕ್ಷತೆಯಲ್ಲಿ ಡೆಂಘೆ ಪರಿಸ್ಥಿತಿಯ ದೈನಂದಿನ ನಿಗಾವಣೆಗೆ ರಚಿಸಿರುವ ಜಿಲ್ಲಾ ಮಟ್ಟದ ಟಾಸ್ಕ್ ​ಫೋರ್ಸ್​ ಸಮಿತಿ ಸಭೆ ಮಂಗಳವಾರ ಜರುಗಿತು.
ಜಿಲ್ಲಾಧಿಕಾರಿ ಮಾತನಾಡಿ, ಡೆಂಘೆ ಹಾಟ್​ ಸ್ಪಾಟ್​ಗಳನ್ನು ಗುರುತಿಸಿ ಲಾರ್ವಾನಾಶ, ಜಾಗೃತಿ ಕಾರ್ಯಕ್ರಮ ನಡೆಸಬೇಕು. ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಪ್ರತಿ ಶನಿವಾರ ಸ್ವಚ್ಚತಾ ಅಭಿಯಾನ ನಡೆಸಿ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ಈ ಕಾರ್ಯಕ್ಕೆ ಶಾಲೆ ಎಸ್​ಡಿಎಂಸಿ ಸದಸ್ಯರನ್ನು ಆಹ್ವಾನಿಸಬೇಕು ಎಂದರು.
ಜ್ವರ ಬಂದಾಗ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ನೋಂದಾಯಿತ ಖಾಸಗಿ ಆಸ್ಪತ್ರೆಗಳು ಪರೀಕ್ಷೆಗೆ ಒಳಪಡುವ ರೋಗಿಗಳ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ನಕಲಿ ವೈದ್ಯರ ಬಗ್ಗೆ ದೂರುಗಳು ಬರುತ್ತಿವೆ. ಈ ಕುರಿತು ಜಿಲ್ಲಾ ಆರೋಗ್ಯ ಇಲಾಖೆ ತುರ್ತು ಕ್ರಮ ವಹಿಸದಿದ್ದರೆ ಇಲಾಖೆ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.
ಸರ್ಕಾರ ಡೆಂಘೆ ಪರೀಕ್ಷೆಗೆ ನಿಗದಿ ಮಾಡಿರುವ ದರ ಪಟ್ಟಿಯನ್ನು ಪ್ರತಿ ಆಸ್ಪತ್ರೆ ಆವರಣದಲ್ಲಿ ಕಾಣುವಂತೆ ಪ್ರಕಟಿಸಬೇಕು. ಈ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಖಚಿತಪಡಿಸಿಕೊಳ್ಳಬೇಕು. ಹೆಚ್ಚು ದರ ವಸೂಲಿ ಮಾಡುವ ಆಸ್ಪತ್ರೆ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪ ಗಾಬಿ, ಕಿಮ್ಸ ಆಸ್ಪತ್ರೆಯ ಡಾ.ಲಕ್ಷ್ಮೀಕಾಂತ ಲೋಕರೆ, ಐಎಂಎ, ಐಎಪಿ ಜಿಲ್ಲಾಧ್ಯಕ್ಷರು, ಸಮಿತಿ ಸದಸ್ಯರು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net