ಬಳ್ಳಾರಿ ; ಮಳೆಗಾಲ ಆರಂಭವಾಗುವ ಮುನ್ನವೇ ನಗರದಲ್ಲಿನ ರಸ್ತೆಗಳ ಎಲ್ಲ ಗುಂಡಿಗಳ ಮುಚ್ಚಲು ಕೂಡಲೇ ಕಾರ್ಯ ಪ್ರವೃತ್ತರಾಗಬೇಕು ಎಂದು ಶಾಸಕ ಬಿ.ನಾಗೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ನಗರದಲ್ಲಿರುವ ಎಲ್ಲ ಗುಂಡಿಗಳ ಸರ್ವೆ ನಡೆಸಬೇಕು. ಗುಂಡಿ ಮುಚ್ಚಲು ಕೇವಲ 40 ಲಕ್ಷ ರೂ. ಸಾಲದು, ಹೆಚ್ಚಿನ ಅನುದಾನ ನೀಡಲಾಗುವುದು. ಅಲ್ಲದೆ, ಎಲ್ಲ ಉಪ ರಸ್ತೆಗಳ ಗುಂಡಿಗಳನ್ನು ಮುಚ್ಚಬೇಕು. ಸಾರ್ವಜನಿಕರಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ಕ್ರಮವಹಿಸಿ ಎಂದು ತಾಕೀತು ಮಾಡಿದರು.
ಪಾಲಿಕೆ ಸದಸ್ಯ ಎಂ.ಪ್ರಭಂಜನಕುಮಾರ ಮಾತನಾಡಿ, ನಗರದ ಹದ್ದಿನಗುಂಡು ಬಳಿ ಕೊಳಚೆ ನೀರು ಸಂಸ್ಕ್ರರಣ ಘಟಕ ನಿರ್ಮಿಸಿದೆ. ಆದರೆ, ಕಳೆದ ಎರಡು ವರ್ಷದಿಂದ ಸಮರ್ಪಕವಾಗಿ ಘಟಕ ನಿರ್ವಹಣೆಯಿಲ್ಲ. ಅಲ್ಲದೆ, ಕೊಳಚೆ ನೀರನ್ನು ಶುದ್ಧಿಕರಿಸದ ಹೊರ ಹರಿಸಿದ ನೀರಿನಿಂದ ತರಕಾರಿ ಬೆಳೆಯುತ್ತಿದ್ದು, ಶೇ.40% ಜನರು ಆಹಾರಕ್ಕೆ ಬಳಸುತ್ತಿದ್ದಾರೆ. ಇದಲ್ಲದೆ, ಎರಡು ವರ್ಷದಿಂದ ನಿರ್ವಹಣೆ ನಡೆಸದ ಆಹಮಬಾದ್ ಕಂಪನಿಗೆ 2.11 ಕೋಟಿ ರೂ. ಹಣ ಪಾವತಿಸಿದ್ದು ಇದರಲ್ಲಿ ಅಧಿಕಾರಿಗಳು ಅಕ್ರಮ ಎಸಗಿರುವುದು ಬಹಿರಂಗವಾಗಿದೆ. ಲೋಕಾಯುಕ್ತ ದೂರು ನೀಡುವೆ ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಆಡಳಿತ ಹಾಗೂ ವಿರೋಧ ಪಕ್ಷದ ನಾಯಕರು ಧ್ವನಿಗೂಡಿಸಿದರು. ಪಾಲಿಕೆ ವ್ಯಾಪ್ತಿಯ ತೇವಬಾವಿ ಹಾಗೂ ಎಸ್‌ಟಿಪಿ ಕಾರ್ಮಿಕರನ್ನು ಗುತ್ತಿಗೆ ಆಧಾರದ ಮೇಲೆ ನಿಯೋಜಿಸುವ ಬಗ್ಗೆ ತಾತ್ಕಲಿಕವಾಗಿ ಟೆಂಡರ್ ತಡೆಯುವಂತೆ ಪಟ್ಟುಹಿಡಿದರು.
ಮೇಯರ್ ಮುಲ್ಲಂಗಿ ನಂದೀಶ್ ಮಾತನಾಡಿ, ಪಾಲಿಕೆ ವ್ಯಾಪ್ತಿಯ ಕೊಳಚೆ ನೀರು ಸಂಸ್ಕ್ರರಣ ಘಟಕದ ನಿರ್ವಹಣೆಯಲ್ಲಿ 2.11 ಕೋಟಿ ರೂ. ಅಕ್ರಮದ ಆರೋಪದ ಬಗ್ಗೆ ಕಮಿಟಿ ರಚಿಸಿದ್ದು, ತನಿಖೆ ನಡೆಸಿ ವರದಿ ಸಲ್ಲಿಸಲಾಗುವುದು. ತನಿಖೆಯ ಕಮಿಟಿಗೆ ಆಡಳಿತ ಹಾಗೂ ವಿರೋಧ ಪಕ್ಷದ ಇನ್ನೂ ಎರಡ್ಮೂರು ಪಾಲಿಕೆ ಸದಸ್ಯರನ್ನು ನೇಮಿಸಿ ನಿಪಕ್ಷಪಾತವಾಗಿ ವಿಚಾರಿಸಿ ತಪ್ಪಿಸ್ಥರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಮಳೆಗಾಲ ಮುನ್ನವೇ ಮಿಷನರಿ ಹಾಗೂ ಮಾನ್ಯುವೆಲ್ ಮೂಲಕ ಯಾವ ಯಾವ ರಾಜಕಾಲುವೆಗಳು ಸ್ವಚ್ಛಗೊಳ್ಳಲಿವೆ ಎಂಬುದರ ಬಗ್ಗೆ ಸಂಬಂಧಪಟ್ಟ ಇಂಜನಿಯರ್‌ಗಳು ಮಾಹಿತಿ ನೀಡಬೇಕು. ಒಳಚರಂಡಿ ಹಾಗೂ ರಸ್ತೆಗಳ ದುರಸ್ತಿಗೊಳಿಸಿ ಎಂದರು.
ಸಮಯ ಪಾಲಿಸದ ಅಧಿಕಾರಿ ಹಾಗೂ ಜನಪ್ರತಿನಿಧಿಗಳು : ಇಲ್ಲಿನ ಜಿಪಂನಲ್ಲಿ ನಡೆದ ಸಭೆ 11ಕ್ಕೆ ನಿಗದಿಯಾಗಿತ್ತು. ಆದರೆ, ಸದಸ್ಯರು ತಡವಾಗಿ ಹಾಜರಾಗಿದ್ದರಿಂದ ಒಂದು ಗಂಟೆ ನಂತರ ಆರಂಭವಾಯಿತು. ಶಾಸಕರಾದ ಬಿ.ನಾಗೇಂದ್ರ, ನಾರಾಭರತ ರೆಡ್ಡಿ, ರಾಜ್ಯಸಭಾ ಸದಸ್ಯ ಡಾ.ಸಯ್ಯದ್ ನಾಸೀರ್ ಹುಸೇನ್ ಸಭೆಗೆ ಹಾಜರಾಗುವು ಮುನ್ನವೇ ಹಲವು ವಿಷಯಗಳು ಸಭೆಯಲ್ಲಿ ಅನುಮೋದನೆ ಪಡೆಯಲಾಗಿತ್ತು ಎರಡು ತಾಸು ನಂತರ ಹಾಜರಾದರು.
ಮೇಯರ್, ಸದಸ್ಯ ಜಟಾಪಟಿ : ಕೊಳಚೆ ನೀರು ಸಂಸ್ಕ್ರರಣ ಘಟಕ ಅಕ್ರಮದ ಬಗ್ಗೆ ಸದಸ್ಯ ಎಂ.ಪ್ರಭಂಜನಕುಮಾರ ಹಾಗೂ ಮೇಯರ್ ಮುಲ್ಲಂಗಿ ನಂದೀಶ್ ನಡುವೆ ಜಟಾಪಟಿ ನಡೆಯಿತು. ನಗರದ ಸಮಸ್ಯೆಗಳ ನಿಗದಿ ಮಾಡಿದ ದಿನಗಳ ಬಗ್ಗೆ ಸಭಾನಡಾವಳಿಯಲ್ಲಿ ದಾಖಲಿಸುವ ವೇಳೆ ಮೇಯರ್ ಅನುಮತಿಯಂತೆ ಬೇರೆ ವಿಷಯ ಪ್ರಸ್ತಾಪಿಸಲು ಅಧಿಕಾರಿ ಮುಂದಾದಾಗ ಅಧಿಕಾರಿ ಹಾಗೂ ಮೇಯರ್ ಮೇಲೆ ಪ್ರಭಂಜನ ಕೋಪಗೊಂಡರು.
ಬಾಕ್ಸ್ : ಪಾಲಿಕೆಯಿಂದ ಸಂತನರಣ ಶಸ್ತ್ರಚಿಕಿತ್ಸೆಗೆ ಒಳಗಾದ ನಾಯಿಗಳಿಗೆ ಟ್ಯಾಗ್ ಅಳವಡಿಸಲು ಕ್ರಮವಹಿಸಬೇಕು. ಇಲ್ಲಿನ ಕಾಂಪೋಸ್ಟ್ ಯಾರ್ಡ್‌ನಲ್ಲಿ ಮಣ್ಣಿನ ಪರೀಕ್ಷೆ ನಡೆಸಿದ್ದು ಅಸಮರ್ಪಕ ತ್ಯಾಜ್ಯ ನಿರ್ವಹಣೆಯಿಂದ 150 ಅಧಿಕ ಕಾಯಿಲೆಗಳು ಬರುವ ಸಾಧ್ಯತೆಯಿದೆ ಎಂದು ವರದಿ ನೀಡಿದೆ.
ಕೋಟ್...ನಗರದಲ್ಲಿ ವಿವಿಧಡೆ ಕಾಮಗಾರಿಗಳು ನಡೆಯುತ್ತಿರುವುದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಿದೆ. ಪೊಲೀಸರು ಟ್ರಾಫಿಕ್ ಸಮಸ್ಯೆ ನಿವಾರಿಸಲು ಕ್ರಮವಹಿಸಬೇಕು. ಎರಡ್ಮೂರು ವರ್ಷದಿಂದ ಸಣ್ಣ ಮಾರುಕಟ್ಟೆ ಕಾಮಗಾರಿ ಪ್ರಗತಿಯಲ್ಲಿದ್ದು ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಬೇಕು.
- ಡಾ.ಸಯ್ಯದ್ ನಾಸೀರ್ ಹುಸೇನ್, ಸದಸ್ಯ, ರಾಜ್ಯಸಭಾ.
ಕೋಟ್.... ನಗರದ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಭೂಮಿ ಅಗೆದು ಬ್ಯಾನರ್ ಹಾಕುವವರಿಗೆ ಯಾವುದೇ ಕಾರಣಕ್ಕೂ ಅನುಮತಿ ಪಾಲಿಕೆಯಿಂದ ಅನುಮತಿ ನೀಡಬಾರದು. ಕೇವಲ ಹೋಲ್ಡಿಂಗ್ಸ್‌ನಲ್ಲಿ ಹಾಕುವವರಿಗೆ ಮಾತ್ರ ಆಯುಕ್ತರು ಅನುಮತಿ ನೀಡಬೇಕು.
- ನಾರಾ ಭರತರೆಡ್ಡಿ, ಶಾಸಕ, ಬಳ್ಳಾರಿ.