ಕೆರೆ ಒತ್ತುವರಿ ತೆರವಿಗೆ ಕ್ರಮ ತೆಗೆದುಕೊಳ್ಳಿ

Take action to clear lake encroachment
ವಿಜಯಪುರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ವಿವಿಧ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಕುರಿತು ಸಭೆಯಲ್ಲಿ ಜಿಲ್ಲಾಧಿಕಾರಿ ಟಿ. ಭೂಬಾಲನ್​ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಜಿ.ಪಂ. ಸಿಇಒ ರಿಷಿ ಆನಂದ ಮತ್ತಿತರರಿದ್ದಾರೆ.
Published on

ವಿಜಯಪುರ: ಜಿಲ್ಲೆಯ ವ್ಯಾಪ್ತಿಯಲ್ಲಿನ ಒತ್ತುವರಿಯಾದ ಕೆರೆಗಳ ತೆರವುಗೊಳಿಸಲು ಅಧಿಕಾರಿಗಳು ಮುಂದಾಗಬೇಕು. ಅಗತ್ಯ ಬಿದ್ದರೆ ಪೊಲೀಸ್​ ಇಲಾಖೆ ಸಹಾಯ ಪಡೆದು ಒತ್ತುವರಿ ತೆರವಿಗೆ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್​ ಖಡಕ್​ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ವಿವಿಧ ತಾಲೂಕು ತಹಸೀಲ್ದಾರ, ತಾ.ಪಂ. ಇಒ, ಸಣ್ಣ ನೀರಾವರಿ ಇಲಾಖೆ, ಭೂಮಾಪನ ಇಲಾಖೆ ಅಧಿಕಾರಿಗಳ ಜತೆಗೆ ವಿಡಿಯೋ ಸಂವಾದದ ಮೂಲಕ ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಕುರಿತು ಸಭೆ ನಡೆಸಿ ಅವರು ಸೂಚನೆ ನೀಡಿದರು.

ಕೆರೆಗಳ ಒತ್ತುವರಿ ವಿಷಯದಲ್ಲಿ ನನ್ನ ತಾಳ್ಮೆ ಪರೀಕ್ಷಿಸಬೇಡಿ. ಕಾರ್ಯದಲ್ಲಿ ಅಲಕ್ಷತನ, ನಿಷ್ಕಾಳಜಿ ಕಂಡು ಬಂದರೆ ನಾನು ಸಹಿಸುವುದಿಲ್ಲ. ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುವ ಜತೆಗೆ ಯಾವ ಕೆರೆ ಯಾವ ಇಲಾಖೆಗೆ ಸೇರಿದೆ ಎಂಬುದರ ಕುರಿತು ಒಂದು ವಾರದೊಳಗಾಗಿ ಜಿಲ್ಲೆಯಲ್ಲಿರುವ ಎಲ್ಲ ಕೆರೆಗಳ ಆರ್​ಟಿಸಿ ಇಂದೀಕರಣ ಮಾಡಿ ಮಾಲೀಕತ್ವ ನಮೂದಿಸುವಂತೆ ತಾಕೀತು ಮಾಡಿದರು.

ಜಿಲ್ಲೆಯಲ್ಲಿರುವ ಕೆರೆಗಳಿಗೆ ಸಂಬಂಧಿಸಿದಂತೆ ಆರ್​ಟಿಸಿ ಇಂದೀಕರಣ ಮಾಡಿ ಕಾಲಂ ನಂ. 9 ರಲ್ಲಿ ಯಾವ ಇಲಾಖೆಗೆ ಸೇರಿದ ಕೆರೆ ಎಂಬುದು ಮಾಲೀಕತ್ವ ಸ್ಪಷ್ಟವಾಗಿ ನಮೂದಿಸಬೇಕು. ಮುದ್ದೇಬಿಹಾಳ ತಾಲೂಕಿನ 33 ಕೆರೆಗಳ ಪೈಕಿ 3 ಕೆರೆಗಳು ಲೋಕೋಪಯೋಗಿ ಇಲಾಖೆಯಿಂದ ಪಂಚಾಯತ್​ ರಾಜ್​ ಇಲಾಖೆಗೆ ವಿಭಜನೆಯಾಗಿದ್ದರೂ ಸಹ ಆರ್​ಟಿಸಿಯಲ್ಲಿ ಇನ್ನೂ ಹಳೆಯ ಮಾಲೀಕತ್ವ ನಮೂದಾಗಿದೆ. ಕೂಡಲೇ ಇಂದೀಕರಣ ಮಾಡಿ ಮಹಾನಗರ ಪಾಲಿಕೆ, ಗ್ರಾ.ಪಂ., ತಾ.ಪಂ., ಪಪಂ. ಸೇರಿದಂತೆ ಯಾವ ಇಲಾಖೆ ಸೇರಿದೆ ಎಂಬುದನ್ನು ನಮೂದಿಸಬೇಕು ಎಂದು ಸೂಚಿಸಿದರು.

ಕೆಲವೊಂದು ನಗರ ಸ್ಥಳಿಯ ಸಂಸ್ಥೆಗಳು ಗ್ರಾ.ಪಂ.ಯಿಂದ ಪ.ಪಂ.ಗಳಾಗಿ ಮೇಲ್ದರ್ಜೆಗೇರಿದ್ದು, ಇಂತಹ ಬದಲಾವಣೆಯಾದ ಆರ್​ಟಿಸಿಯಲ್ಲಿ ಬದಲಾವಣೆ ಮಾಡಿ ನಮೂದಿಸಲು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಸಣ್ಣ ನೀರಾವರಿ ಕೆರೆಗಳು ಕಳೆದ ಹಲವು ವರ್ಷಗಳಿಂದ ಮಾಲೀಕತ್ವ ಬದಲಾವಣೆಯಾಗದೇ ಬಾಕಿ ಉಳಿದಿವೆ. ಬಹಳಷ್ಟು ಕೆರೆಗಳ ಆರ್​ಟಿಸಿಯಲ್ಲಿ ಹಳೆಯ ಮಾಲೀಕತ್ವ ಉಳಿದಿದ್ದು, ಆ ಕೆರೆಗಳಿಗೆ ಸಂಬಂಧಿಸಿದಂತೆ ಆವಾರ್ಡ್​ ಕಾಪಿ, ಶೀಟ್​ ಪಡೆದುಕೊಂಡು ಕೂಡಲೇ ಮರುಪರಿಶೀಲನೆ ನಡೆಸಿ ಸಮನ್ವಯಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ 266 ಕೆರೆಗಳ ಪೈಕಿ 4 ಕೆರೆಗಳ ಅಳತೆ ಕಾರ್ಯ ಬಾಕಿ ಉಳಿದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಯಾವ ಕಾರಣಕ್ಕಾಗಿ ಅಳತೆ ಕಾರ್ಯ ಬಾಕಿ ಉಳಿದಿದೆ. ಏನಾದರೂ ಸಮಸ್ಯೆಗಳಿದ್ದಲ್ಲಿ ಪರಿಹರಿಸಿಕೊಂಡು ಭೂಮಾಪನ ಇಲಾಖೆಯಿಂದ ಅಳತೆ ಕಾರ್ಯ ಪೂರ್ಣಗೊಳಿಸಬೇಕು. ಯಾವುದೇ ಬಾಕಿ ಉಳಿಯದಂತೆ ನೋಡಿಕೊಳ್ಳಬೇಕು. ಈಗಾಗಲೇ, ಕೆರೆಗಳ ಸಂರಕ್ಷಣೆಗಾಗಿ ಆಯಾ ತಾಲೂಕಾವಾರು ಪ್ರತ್ಯೇಕ ಸಭೆಗಳನ್ನು ನಡೆಸಲಾಗುವುದು. ಈ ಸಭೆಗೆ ಸಂಬಂಧಿಸಿದ ಅಧಿಕಾರಿಗಳು ಎಲ್ಲ ಅಗತ್ಯ ಮಾಹಿತಿಯೊಂದಿಗೆ ಖುದ್ದಾಗಿ ಹಾಜರಿರುವಂತೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕೆರೆಗಳ ಸಂರಕ್ಷಣೆಗಾಗಿ ಬಿಡುಗಡೆಯಾದ ಅನುದಾನ ಸಮರ್ಪಕವಾಗಿ ಬಳಕೆ ಮಾಡಬೇಕು. ಯಾವುದೇ ಅನುದಾನ ಬಾಕಿ ಉಳಿಸಿಕೊಳ್ಳಬಾರದು. ಅನುದಾನದಿಂದ ಕೆರೆಗಳಿಗೆ ತಂತಿ, ಬೇಲಿ, ಕಂದಕ ತೆಗೆಯುವುದು ಸೇರಿದಂತೆ ಸೂಕ್ತವಾಗಿ ಬಳಕೆ ಮಾಡಿ ಬಳಕೆ ಪ್ರಮಾಣ ಪತ್ರ ಸಲ್ಲಿಸುವಂತೆ ಅವರು ಸೂಚಿಸಿದರು.

ಜಿ.ಪಂ. ಸಿಇಒ ರಿಷಿ ಆನಂದ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಜಿ.ಪಂ. ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net