

ಬೆಂಗಳೂರು: ಲಾಕ್ಡೌನ್ ಪರಿಣಾಮದಿಂದ ಮಳಿಗೆಗಳಲ್ಲಿ ಮಾರಾಟಕ್ಕಿರುವ ಪ್ರಾಣಿಗಳು ಆಹಾರವಿಲ್ಲದೆ ಹಸಿವಿನಿಂದ ಬಳಲುತ್ತಿದ್ದು, ಕೂಡಲೇ ಮಳಿಗೆಗಳನ್ನು ತೆರೆಯಬೇಕು ಎಂದು ಬಿಬಿಎಂಪಿಗೆ ಕರ್ನಾಟಕ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಶಿವಾನಂದ ಎಂ. ಡಂಬಳ ನಿರ್ದೇಶಿಸಿದ್ದಾರೆ.
ಬಿಬಿಎಂಪಿಯ ಪಶುಪಾಲನಾ ವಿಭಾಗದ ಅಧಿಕಾರಿಗಳು, ಪ್ರಾಣಿ ದಯಾ ಸಂಘ ಸಂಸ್ಥೆಗಳ ಸದಸ್ಯರೊಂದಿಗೆ ಭಾನುವಾರ ನಡೆದ ಚರ್ಚೆಯಲ್ಲಿ ಮಾತ ನಾಡಿದರು. ಮಳಿಗೆಗಳಲ್ಲಿ ಸಿಲುಕಿಕೊಂಡಿರುವ ನಾಯಿ, ಬೆಕ್ಕು, ಹಕ್ಕಿ, ಪಕ್ಷಿ, ಮೀನುಗಳಿಗೆ ಆಹಾರ ಸಿಗುತ್ತಿಲ್ಲ. ಹಾಗಾಗಿ, ತಕ್ಷಣ ಮಾರಾಟ ಮಳಿಗೆಗಳನ್ನು ತೆರೆದು ಆಹಾರದ ವ್ಯವಸ್ಥೆ ಮಾಡಬೇಕು. ಜತೆಗೆ, ಅನಧಿಕೃತ ಮಳಿಗೆ ನಡೆಸುತ್ತಿರುವವರನ್ನು ಪತ್ತೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಬೀದಿನಾಯಿ ಸೇರಿ ಇತರೆ ಪ್ರಾಣಿಗಳಿಗೆ ಆಹಾರ ದೊರೆಯುತ್ತಿಲ್ಲ. ಬೀದಿ ನಾಯಿಗಳು ಆಹಾರಕ್ಕೆ ಮನುಷ್ಯರನ್ನು ಅವಲಂಬಿಸಿವೆ. ಹಾಗಾಗಿ, ಪಾಲಿಕೆ ಮತ್ತು ಸ್ವಯಂಸೇವಾ ಸಂಸ್ಥೆಗಳು ಪ್ರಾಣಿಗಳಿಗೆ ಆಹಾರ ಒದಗಿಸುವ ವ್ಯವಸ್ಥೆ ಮಾಡಬೇಕು. ಈ ನಿಟ್ಟಿನಲ್ಲಿ ವಲಯವಾರು ಕ್ರಿಯಾ ಯೋಜನೆ ಸಿದ್ಧಪಡಿಸಬೇಕು ಎಂದರು.
2 ಹೊತ್ತು ಆಹಾರ ಪೂರೈಸಿ: ಬೀದಿನಾಯಿ ಹಾಗೂ ಎಲ್ಲ ಪ್ರಾಣಿಗಳಿಗೆ ಪ್ರತಿದಿನ ಬೆಳಗ್ಗೆ 7.30ರಿಂದ 9 ಗಂಟೆ ಮತ್ತು ಸಂಜೆ 4ರಿಂದ 6 ಗಂಟೆಗೆ 2 ಬಾರಿ ಆಹಾರ ವಿತರಿಸಬೇಕು. ಇದಕ್ಕಾಗಿ ಪಾಲಿಕೆ 8 ವಲಯಗಳಲ್ಲಿ ಬಿಬಿಎಂಪಿಯ 3 ಹಾಗೂ ಎನ್ಜಿಒ 5 ವಾಹನ ವ್ಯವಸ್ಥೆ ಮಾಡಿಕೊಂಡು ಆಹಾರ ವಿತರಿಸಬೇಕು ಎಂದು ಶಿವಾನಂದ್ ತಿಳಿಸಿದ್ದಾರೆ.
ಬಿಬಿಎಂಪಿ ಪಶುಪಾಲನಾ ವಿಭಾಗದ ನಿರ್ದೇಶಕ ಶಶಿಕುಮಾರ್ ಸೇರಿದಂತೆ ನಗರದ ಪ್ರಾಣಿ ದಯಾ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.