

ಮುಧೋಳ: ಬಯಲು ಮುಕ್ತ ಶೌಚಗೃಹಕ್ಕೆ ಈಗಾಗಲೇ 7.5 ಕೋಟಿ ರೂಗಳನ್ನು ಸಿಎಸ್‌ಆರ್ ಫಂಡ್‌ನಲ್ಲಿ ನೀಡಿದ್ದು, ತ್ವರಿತವಾಗಿ ಶೌಚಗೃಹ ಸಮಸ್ಯೆಗೆ ಸ್ಪಂದಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ನಗರದ ತಾಪಂ ಸಭಾಭವನದಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವರ್ಷದ ಹಿಂದೆ ವರ್ಚಗಲ್ಲದಲ್ಲಿ ಆರಂಭಿಸಿದ ಶೌಚಗೃಹ ಕಾಮಗಾರಿ ಇನ್ನೂ ಮುಗಿದಿಲ್ಲ ಎಂದರೆ ಏನರ್ಥ? ಎಂದು ಜಿಪಂ ಅಧಿಕಾರಿ ತಿಮ್ಮಣ್ಣ ಮೀಸಿಗೆ ತರಾಟೆಗೆ ತೆಗೆದುಕೊಂಡರು.
ನಗರಸಭೆ ಪೌರಾಯುಕ್ತ ಗೋಪಾಲ ಕಾಸೆ ನಗರದಲ್ಲಿ 739 ಆಸ್ತಿಯಿಂದ ತೆರಿಗೆ ಸಂಗ್ರಹವಾಗಿದೆ. 58 ಮಳಿಗೆಗಳು ಖಾಲಿ ಉಳಿದಿವೆ ಎಂದು ತಿಳಿಸಿದರು.
ಸಚಿವ ಆರ್.ಬಿ. ತಿಮ್ಮಾಪೂರ ಮಾತನಾಡಿ, ಅಗತ್ಯವಿದ್ದರೆ ಮೊಬೈಲ್ ಶೌಚಗೃಹ ನಿರ್ಮಿಸಬೇಕು. ಜತೆಗೆ ವ್ಯಾಪಾರಿ ಮಳಿಗೆಗೆಗಳನ್ನು ದುರಸ್ತಿಗೊಳಿಸಬೇಕಲ್ಲದೆ ಕರವಸೂಲಿ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕೆಂದು ಪೌರಾಯುಕ್ತರಿಗೆ ಸೂಚಿಸಿದರು.
ಸ್ಮಶಾನದಲ್ಲಿನ ಕಾಮಗಾರಿ ಪೂರ್ಣಗೊಂಡಿದೆ ಎಂದು ಎರಡೆರಡು ಬಾರಿ ಬಿಲ್ ತೆಗೆದಿದ್ದು ನನ್ನ ಗಮನಕ್ಕೆ ಬಂದಿದ್ದು, ಕೂಡಲೇ ನಿರ್ಮಿತಿ ಕೇಂದ್ರದ ಅಧಿಕಾರಿ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅವರಿಗೆ ಆದೇಶಿಸಿದರು. ಸ್ಮಶಾನಕ್ಕೆ ಸಂಬಂಧಿಸಿದ ಗ್ರಾಮೀಣ ಪ್ರದೇಶದಲ್ಲಿರುವ ಭೂವ್ಯಾಜ್ಯಗಳ ಕುರಿತು ತಹಸೀಲ್ದಾರರು ಆಸಕ್ತಿ ವಹಿಸಬೇಕೆಂದು ತಿಳಿಸಿದರು.
ಹೆಸ್ಕಾಂ ಎಇಇ ವೀರಣ್ಣ ಮರಿಕಟ್ಟಿ ಮಾತನಾಡಿ, ಹೆಬ್ಬಾಳದಲ್ಲಿ ಕೆಇಬಿಗೆ ಸಂಬಂಧಿಸಿದಂತೆ ಹೈಟೆನ್ಸನ್ ಕಂಬ ನೆಡಲು ಏಳು ರೈತರ ವಿರೋಧವಿದ್ದು ಅವರ ಮನವೊಲಿಸಲು ಮುಂದಾಗಿದ್ದೇವೆ ಎಂದು ತಿಳಿಸಿದರು.
ತಹಸೀಲ್ದಾರ್ ವಿನೋದ ಹತ್ತಳ್ಳಿ ಮಾತನಾಡಿ, ನಗರದಲ್ಲಿ ಮೂರರ ಪೈಕಿ ಎರಡು ಸೇರಿ ತಾಲೂಕಿನಲ್ಲಿ 38 ಕೆರೆಗಳಲ್ಲಿ 15 ಕೆರೆಗಳು ಒತ್ತುವರಿಯಾಗಿವೆ. ದತ್ತಾತ್ರೇಯ ಕೆರೆ 3.11 ಗುಂಟೆ ಎಕರೆ ಒತ್ತುವರಿಯಾಗಿದೆ ತಿಳಿಸಿದಾಗ, ಬವಿವಿ ಸಂಘದವರಿಂದ ದತ್ತ ಕೆರೆ ಸುತ್ತ ಕಾಂಪೌಂಡ್ ನಿರ್ಮಿಸಲಾಗಿದೆ. ಸಿದ್ಧರಾಮೇಶ್ವರ ನಗರದ ಕೆರೆಯ ಬಗ್ಗೆ ನಗರಸಭೆ ವತಿಯಿಂದ ಮುಲಾಜಿಲ್ಲದೆ ಸರ್ವೇ ಮಾಡಿಸಬೇಕೆಂದು ಸಚಿವರು ಸೂಚಿಸಿದರು.
ಅಬಕಾರಿ ಇಲಾಖೆಯ ರಾಜು ಹೊಸಮನಿ ಮಾತನಾಡಿ, ಶಿರೋಳ ಬಳಿ 8 ಕೆಜಿ ಗಾಂಜಾ ವಶಕ್ಕೆ ತೆಗೆದುಕೊಂಡ ಕುರಿತು ಮಾಹಿತಿ ನೀಡಿದರು.
ಆ.17ರ ಸಭೆಯಲ್ಲಿ ಉಳಿದ ಇಲಾಖೆಗಳ ಪ್ರಗತಿ ಬಗ್ಗೆ ಚರ್ಚಿಸಲು ನಿರ್ಧರಿಸಲಾಯಿತು. ತಾಪಂ ಆಡಳಿತಾಧಿಕಾರಿ ಸಿದ್ದರಾಮೇಶ್ವರ ಉಕ್ಕಲಿ, ತಾಪಂ ಇಒ ಸಂಜೀವ ಹಿಪ್ಪರಗಿ ಇತರರಿದ್ದರು.