ಮಾತ್ರೆ, ಔಷಧ ಕೊರತೆಯಾಗದಂತೆ ಕ್ರಮಕೈಗೊಳ್ಳಿ

15 hkr 01..
Published on

ಹಿರೇಕೆರೂರ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರೆ, ಔಷಧಗಳ ಕೊರತೆಯಿಂದ ರೋಗಿಗಳು ಪರಿತಪಿಸಬಾರದು. ಈ ನಿಟ್ಟಿನಲ್ಲಿ ತಾಲೂಕು ಆರೋಗ್ಯಾಧಿಕಾರಿಗಳು ಮುಂಜಾಗ್ರತೆ ವಹಿಸಬೇಕು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.


ಪಟ್ಟಣದ ತಾಪಂ ಸಭಾಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ತಾಪಂ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಆರೋಗ್ಯ ಇಲಾಖೆಯ ಪ್ರಗತಿ ವರದಿಯ ಸಂದರ್ಭದಲ್ಲಿ ಆರೋಗ್ಯಾಧಿಕಾರಿ ಡಾ. ನೀಲಕಂಠಸ್ವಾಮಿ ನ್ಯಾಮತಿ ಅವರಿಗೆ ಸೂಚಿಸಿದರು.


ಸಾರಿಗೆ ಇಲಾಖೆ ವರದಿ ಮಂಡಿಸಿದ ಸಹಾಯಕ ಅಧಿಕಾರಿ ಗಣೇಶ ವರ್ಣೆಕರ್, ಈ ಹಿಂದೆ 86 ಮಾರ್ಗಗಳಲ್ಲಿ ಬಸ್​ಗಳು ಕಾರ್ಯಾಚರಣೆ ಮಾಡುತ್ತಿದ್ದವು. ಈ ವರ್ಷ ಮತ್ತೆ ಮೂರು ಹೊಸ ಮಾರ್ಗಗಳನ್ನು ಮಾಡಲಾಗಿದೆ. ಶಕ್ತಿ ಯೋಜನೆಯಿಂದ ಈವರೆಗೆ 3.88 ಲಕ್ಷ ರೂ. ನಮ್ಮ ಸಾರಿಗೆ ಘಟಕಕ್ಕೆ ಆದಾಯವಾಗಿದೆ ಎಂದರು. ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕ ಬಣಕಾರ, ತಾಲೂಕಿನ ಕಾರಗಿ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು.


ಯಾವ ಪಶು ಆಸ್ಪತ್ರೆಯಲ್ಲಿ ಔಷಧದ ಕೊರತೆಯಿದೆ ಎಂಬ ಬಗ್ಗೆ ಮಾಹಿತಿ ನೀಡಿ ಎಂದು ಪಶುವೈದ್ಯಾಧಿಕಾರಿ ಡಾ. ಕಿರಣ.ಎಲ್., ಅವರಿಗೆ ತಿಳಿಸಿದರು.
ಲೋಕೋಪಯೋಗಿ ಮತ್ತು ಜಿಪಂ ಇಲಾಖೆಗೆ ಸಂಬಂಧಿಸಿದ ಹಾಳಾದ ರಸ್ತೆಗಳನ್ನು ಹಾಗೂ ಗುಂಡಿಗಳನ್ನು ಕಾಲಮಿತಿಯೊಳಗೆ ಮುಚ್ಚಿಸಿ ನಿಯಮದಂತೆ ಅಭಿವೃದ್ಧಿಪಡಿಸಬೇಕು ಎಂದು ಸೂಚಿಸಿದರು.


ಬಿಇಒ ಎನ್. ಶ್ರೀಧರ್ ತಮ್ಮ ಇಲಾಖೆಯ ವರದಿ ಮಂಡಿಸುತ್ತಾ, ಕಳೆದ ಭಾರಿ 34553, ಈ ವರ್ಷ 33525 ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಪಡೆದಿದ್ದು, ಈ ವರ್ಷ 1028 ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಒಂದು ನವೋದಯ, ಮುರಾರ್ಜಿ ಶಾಲೆಗಳಿಗೆ ಆಯ್ಕೆ, ಮತ್ತೊಂದು ಕಡೆ ಮಕ್ಕಳ ಜನನ ಸಂಖ್ಯೆ ಕಡಿಮೆಯಾಗಿರುವ ಕುರಿತು ಶಾಸಕರ ಗಮನ ಸೆಳೆದರು.

ತಾಲೂಕಿನಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತವಾಗಬೇಕು. ಈಗಾಗಲೇ ಹಿರೇಕೆರೂರ ಹಾಗೂ ರಟ್ಟಿಹಳ್ಳಿ ತಾಲೂಕುಗಳನ್ನು ಸರ್ಕಾರ ಬರಗಾಲಪೀಡಿತ ಎಂದು ಘೊಷಣೆ ಮಾಡಿದೆ. ಕುಡಿಯುವ ನೀರು, ವಿದ್ಯುತ್ ಸರಬರಾಜಿಗೆ ತೊಂದರೆಯಾಗಬಾರದು, ಸಮಸ್ಯೆ ಹೆಚ್ಚಾಗುವ ಮುನ್ನವೇ ಎಚ್ಚೆತ್ತುಕೊಳ್ಳಬೇಕು. ಯಾವ ಇಲಾಖೆಯ ಮುಂದೆಯೂ ಜನದಟ್ಟಣೆ ಇರಬಾರದು. | ಯು.ಬಿ.ಬಣಕಾರ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net