

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲೆಯಲ್ಲಿ ಇಂದ್ರಧನುಷ್ ಲಸಿಕಾ ಅಭಿಯಾನದ 3ನೇ ಸುತ್ತಿನ ಲಸಿಕಾ ಅಭಿಯಾನವನ್ನು ಅ. 9ರಿಂದ 14ರವರೆಗೆ ಹಮ್ಮಿಕೊಂಡಿದ್ದು, 5 ವರ್ಷದೊಳಗಿನ ಮಕ್ಕಳಿಗೆ, ಗರ್ಭಿಣಿಯರಿಗೆ ಲಸಿಕೆ ನೀಡಲಾಗುವುದು. ಯಾವುದೇ ಮಗು ಮತ್ತು ಗರ್ಭಿಣಿ ಮಹಿಳೆಯರು ಲಸಿಕೆಯಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಪಂ ಸಿಇಒ ಸ್ವರೂಪ ಟಿ.ಕೆ. ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಿಷನ್ ಇಂದ್ರಧನುಷ್ ಕಾರ್ಯಕ್ರಮದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಮಹತ್ವದ ಆರೋಗ್ಯ ಕಾರ್ಯಕ್ರಮವು ಸಮರ್ಪಕವಾಗಿ ಅರ್ಹರಾದ ಎಲ್ಲರಿಗೂ ತಲುಪಬೇಕು. ಯಾವುದೇ ಮಗು ಹಾಗೂ ಗರ್ಭಿಣಿಯರು ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಮಕ್ಕಳಿಗೆ ಈ ವಿಶೇಷ ಲಸಿಕೆ ಹಾಕಿಸಲು ಹಿಂದೇಟು ಹಾಕುವ ಪಾಲಕರಿಗೆ ಮನವೊಲಿಸಿ ಅವರ ಮಕ್ಕಳಿಗೆ ತಪ್ಪದೆ ಲಸಿಕೆ ಹಾಕಿಸಿ. ಜಿಲ್ಲೆಯಲ್ಲಿ ಶೇ. 100ರಷ್ಟು ಲಸಿಕಾ ಪ್ರಗತಿ ಸಾಧಿಸಬೇಕು ಎಂದರು.
ಲಸಿಕೆ ಪಡೆದ ಮಕ್ಕಳ ಬಗ್ಗೆ ಶಾಲಾ ಹಂತದಲ್ಲಿ ಮಾಹಿತಿ ಸಂಗ್ರಹಿಸಿ, ಲಸಿಕೆಯಿಂದ ಹೊರಗುಳಿದ ಮಕ್ಕಳಿಗೆ ತಪ್ಪದೆ ಲಸಿಕೆ ನೀಡುವಲ್ಲಿ ಶಿಕ್ಷಕರು, ಶಾಲಾ ಮುಖ್ಯಸ್ಥರು ಶ್ರಮಿಸಬೇಕು. ಇಂದ್ರಧನುಷ್ ಕಾರ್ಯಕ್ರಮದಲ್ಲಿ ಧನುರ್ವಾಯು, ದಢಾರ, ನಾಯಿ ಕೆಮ್ಮು, ಕಾಮಾಲೆ ಮತ್ತು ಪೋಲಿಯೋ ರೋಗಗಳ ವಿರುದ್ಧ ಲಸಿಕಾಕರಣ ಮಾಡಲಾಗುತ್ತದೆ. ಪರಿಣಾಮಕಾರಿ ಅನುಷ್ಠಾನಕ್ಕಾಗಿ ಇಂದ್ರಧನುಷ್ ಲಸಿಕಾ ಕೇಂದ್ರಗಳನ್ನು, ತಂಡಗಳನ್ನು ರಚಿಸಲಾಗಿದೆ ಎಂದರು.
ವಿಶ್ವ ಆರೋಗ್ಯ ಸಂಸ್ಥೆ ಬೆಳಗಾವಿ ವಿಭಾಗದ ಸಮೀಕ್ಷಣಾ ವೈದ್ಯಕೀಯ ಅಧಿಕಾರಿ ಡಾ. ಸಿದ್ದಲಿಂಗಯ್ಯ ಎಚ್. ಮಾತನಾಡಿದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪ ಗಾಬಿ, ಕಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ಸಿ., ಎಸ್.ಎಸ್. ಕೆಳದಿಮಠ, ಪದ್ಮಾವತಿ ಜಿ., ಡಾ. ಮಂಜುನಾಥ ಸೊಪ್ಪಿಮಠ, ಡಾ. ಅಯ್ಯನಗೌಡ ಪಾಟೀಲ, ಡಾ. ಮಹೇಶ ಚಿತ್ತರಗಿ, ಡಾ. ತನುಜಾ. ಕೆ.ಎನ್., ಡಾ.ವಿದ್ಯಾವತಿ ಪಾಟೀಲ, ಡಾ. ಆರ್.ಬಿ. ಬೊವೇರ, ಡಾ. ಕರ್ಲವಾಡ, ದೀಪಾ ಜಾವೂರ, ವಿಜಯಲಕ್ಷ್ಮೀ ಪಾಟೀಲ, ಡಾ. ಸುಭಾಷ ಬಬ್ರುವಾಡ, ಇತರರು ಇದ್ದರು.
ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಸುಜಾತಾ ಹಸವಿಮಠ ಅವರು ಸ್ವಾಗತಿಸಿದರು.