ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಿ: ಶಾಸಕ ಜಿ.ಟಿ.ದೇವೇಗೌಡ ಅಧಿಕಾರಿಗಳಿಗೆ ಸೂಚನೆ

mysore
Published on

ಮೈಸೂರು: ವಿಜಯನಗರ 4ನೇ ಹಂತದಲ್ಲಿ ನಾಲ್ಕು ತಿಂಗಳಿಂದ ಸಮರ್ಪಕವಾಗಿ ಕಸ ವಿಲೇವಾರಿಯಾಗುತ್ತಿಲ್ಲ. ಈ ರೀತಿಯ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಸೂಚಿಸಿದರು.


ನಗರದ ಜಲದರ್ಶಿನಿ ಅತಿಥಿಗೃಹದಲ್ಲಿರುವ ಶಾಸಕರ ಕಚೇರಿಯಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸರಿಯಾಗಿ ಕಸ ವಿಲೇವಾರಿ ಮಾಡುತ್ತಿಲ್ಲ. ಒಳಚರಂಡಿ ದುರಸ್ತಿ ಕೈಗೊಂಡಿಲ್ಲ ಎಂದು ಅಲ್ಲಿನ ನಿವಾಸಿಗಳು ದೂರುತ್ತಿದ್ದಾರೆ. ಕೂಡಲೇ ಸಮಸ್ಯೆಗಳ ಪಟ್ಟಿ ಮಾಡಿಕೊಂಡು ಬಗೆಹರಿಸುವಂತೆ ಮುಡಾ ಆಯುಕ್ತರಿಗೆ ನಿರ್ದೇಶಿಸಿದ ಅವರು, ಹೂಟಗಳ್ಳಿ ನಗರಸಭೆ ಪೌರಾಯುಕ್ತರು, ಮುಡಾ ಆಯುಕ್ತರು ಜಂಟಿಯಾಗಿ ಸಭೆ ನಡೆಸಿ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಲು ಸೂಚಿಸಿದರು.


ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಹೆಚ್ಚುವರಿಯಾಗಿ ನೀರು ನೀಡುವಂತೆ ಪಾಲಿಕೆ ಆಯುಕ್ತರಿಗೆ ಸಲಹೆ ನೀಡಿದರು. ವಿಜಯನಗರ ನಗರ 4ನೇ ಹಂತಕ್ಕೆ ಅಧಿಕಾರಿಗಳೊಡನೆ ಭೇಟಿ ನೀಡಿ ಪರಿಶೀಲಿಸುವಂತೆ ಆಯುಕ್ತರಿಗೆ ಶಾಸಕ ಜಿಟಿಡಿ ತಿಳಿಸಿದರು.


ದಾಸನಕೊಪ್ಪಲು, ರೂಪಾನಗರ, ಮರಟಿಕ್ಯಾತನಹಳ್ಳಿ ಒಳಚರಂಡಿ ಸಮಸ್ಯೆಯನ್ನು ಬಗೆಹರಿಸಲು ಈಗಾಗಲೇ 25 ಕೋಟಿ ರೂ. ವೆಚ್ಚದ ಕ್ರಿಯಾಯೋಜನೆ ರೂಪಿಸಿದ್ದು, ಅನುಮೋದನೆ ಹಂತದಲ್ಲಿದೆ. ಗ್ರಾಮಗಳ ಒಳಚರಂಡಿ ಸಮಸ್ಯೆ ಕುರಿತು ಬೋಗಾದಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಇಂಜಿಯರ್ ಆಶೀಫ್ ಅವರಿಗೆ ಸ್ಥಳಕ್ಕೆ ಭೇಟಿ ನೀಡಿ ತಾತ್ಕಾಲಿಕ ಪರಿಹಾರ ಕಲ್ಪಿಸುವಂತೆ ಸೂಚಿಸಿದರು.


ರಾಜಾಜಿನಗರ ಆಶ್ರಯ ಬಡಾವಣೆಯ ರಸ್ತೆ ಮತ್ತು ಒಳಚರಂಡಿಗೆ ಸಂಬಂಧಿಸಿದಂತೆ ಸರ್ವೇ ಮಾಡಿಸಬೇಕು. ಇದು ಪಾಲಿಕೆ ವತಿಯಿಂದ ನಿರ್ಮಾಣವಾಗಿದ್ದು ಪಾಲಿಕೆಯಿಂದ ಅಭಿವೃದ್ಧಿಪಡಿಸಿ ಸ್ಥಳೀಯ ಸಂಸ್ಥೆಗೆ ಈ ಬಡಾವಣೆಯನ್ನು ಹಸ್ತಾಂತರ ಮಾಡಬೇಕು. ಕೆ.ಬಿ.ಎಲ್.ಬಡಾವಣೆ, ಆಲನಹಳ್ಳಿ, ದಟ್ಟಗಳ್ಳಿ, ಕಾರ್ತಿಕ ಬಡಾವಣೆ, ಆರ್.ಟಿ.ನಗರಕ್ಕೆ ಕುಡಿಯುವ ನೀರನ್ನು ಒದಗಿಸಲು ಅಲ್ಲಿಯ ನಿವಾಸಿಗಳು ಮನವಿ ಸಲ್ಲಿಸಿದ್ದು ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕರು ತಿಳಿಸಿದರು.


ವಿಜಯನಗರ 4ನೇ ಹಂತದ ನಿರ್ವಹಣೆಗೆ ಅಗತ್ಯ ಇರುವ ಅನುದಾನವನ್ನು ಬಿಡುಗಡೆ ಕ್ರಮ ಕೈಗೊಳ್ಳುವುದಾಗಿ ಸಭೆಯಲ್ಲಿ ಮುಡಾ ಆಯುಕ್ತ ರಘುನಂದನ್ ತಿಳಿಸಿದರು.


ಪಾಲಿಕೆ ಆಯುಕ್ತ ಆಸಾದ್ ಉರ್ ರೆಹಮಾನ್ ಷರೀಫ್, ಅಧೀಕ್ಷಕ ಇಂಜಿನಿಯರ್‌ಗಳಾದ ಸಿಂಧು, ಮುರಳೀಧರ್, ಬೋಗಾದಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಸವರಾಜು, ರಮ್ಮನಹಳ್ಳಿ ಪಪಂ ಮುಖ್ಯಾಧಿಕಾರಿ ರವಿಕೀರ್ತಿ ಇನ್ನಿತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net