ಸುಳ್ಳು ಜಾತಿನಿಂದನೆ ಪ್ರಕರಣ ದಾಖಲಿಸಿದನ ಮೇಲೆ ಕ್ರಮಕೈಗೊಳ್ಳಿ

9 hly 1
Published on

ಹಳಿಯಾಳ: ತಾಲೂಕಿನ ಜನಗಾ ಗ್ರಾಮದ ಗಾಂವಠಾಣ ಜಾಗದಲ್ಲಿ ಅನಧಿಕೃತ ಶೆಡ್ ನಿರ್ವಿುಸಿ, ಆ ಸ್ಥಳದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಫೋಟೋ ಇಟ್ಟು ಅಗೌರವ ತೋರಿದ್ದಲ್ಲದೆ, ಜಾತಿನಿಂದನೆ ಪ್ರಕರಣ ದಾಖಲಿಸಿ ಗ್ರಾಮಸ್ಥರಿಗೆ ಬೆದರಿಕೆ ಹಾಕಿದವನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜನಗಾ ಗ್ರಾಮಸ್ಥರು ಹಳಿಯಾಳದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.

ಪಟ್ಟಣದ ಬಸವೇಶ್ವರ ವೃತ್ತದ ಬಳಿ ಜನಗಾ ಗ್ರಾಮಸ್ಥರು ಪ್ರತಿಭಟನೆ ಆರಂಭಿಸಿದರು. ಆಗ ಬಿಜೆಪಿ ಹಾಗೂ ಕಾಂಗ್ರೆಸ್​ನ ಮುಖಂಡರು ಮತ್ತು ದಲಿತ ಸಮುದಾಯದ ಪ್ರಮುಖರು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.

ತಾಲೂಕು ಪಂಚಾಯಿತಿ ಪ್ರಭಾರಿ ಇಒ ಸತೀಶ ಆರ್. ಅವರಿಗೆ ಲಿಖಿತ ಮನವಿ ಸಲ್ಲಿಸಿ, ಪ್ರತಿಭಟನಾ ಮೆರವಣಿಗೆ ಮೂಲಕ ತಹಸೀಲ್ದಾರ್ ಪ್ರವೀಣ ಹುಚ್ಚನ್ನವರ ಹಾಗೂ ಸಿಪಿಐ ಜಯಪಾಲ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

ಮನವಿಯಲ್ಲಿ ಏನಿದೆ?: ಜನಗಾ ಗ್ರಾಮದ ಮಹಾಂತೇಶ ವಡ್ಡರ್ ಎಂಬುವರು ಗ್ರಾಪಂ ಒಡೆತನದಲ್ಲಿರುವ ಸ್ಥಳದಲ್ಲಿ ಅನಧಿಕೃತ ಶೆಡ್ ನಿರ್ಮಾಣ ಮಾಡಿ, ಗ್ರಾಮಸ್ಥರಿಗೆ ಬೆದರಿಕೆ ಹಾಕಿ ತೊಂದರೆ ನೀಡುತ್ತಿದ್ದಾನೆ. ತಾಪಂ, ಗ್ರಾಪಂ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಬೆದರಿಕೆಯೊಡ್ಡಿ ಗ್ರಾಮದ ದಲಿತ ಸಮುದಾಯದ ನಾರಾಯಣ ದುರ್ಗಪ್ಪ ವಡ್ಡರ್ ಹಾಗೂ ಅವರ ಕುಟುಂಬದ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲದೆ, ಇನ್ನಿತರ ಸಮಾಜದ ಜನರ ಮೇಲೆ ಸುಳ್ಳು ದೌರ್ಜನ್ಯ ಪ್ರಕರಣ ದಾಖಲಿಸುತ್ತಿದ್ದಾನೆ. ಇದರಿಂದಾಗಿ ಗ್ರಾಮದಲ್ಲಿ ಅಶಾಂತಿಯ ವಾತಾವರಣ ನಿರ್ವಣವಾಗಿದ್ದು, ಆತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ರೌಡಿಶೀಟರ್ ಬೆಂಬಲ: ಮಹಾಂತೇಶ ವಡ್ಡರ್​ನಿಗೆ ರೌಡಿಶೀಟರ್ ಆಗಿರುವ ತಾಲೂಕಿನ ಕೃಷ್ಣಾ ಹುಲಸವಾರ ಕುಮ್ಮಕ್ಕು ನೀಡುತ್ತಿದ್ದಾನೆ. ಹೀಗಾಗಿ ರೌಡಿಶೀಟರ್​ನ ಮೇಲೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಪ್ರವೀಣ ಹುಚ್ಚನ್ನವರ, ಗ್ರಾಮಸ್ಥರ ಈ ಗಂಭೀರ ಸಮಸ್ಯೆ ಪರಿಹಾರಕ್ಕೆ ಶೀಘ್ರವೇ ತಾಲೂಕು ಆಡಳಿತದಿಂದ ಕ್ರಮ ಕೈಗೊಳ್ಳುತ್ತೇವೆ. ಸಮಸ್ಯೆಯನ್ನು ಶೀಘ್ರ ಇತ್ಯರ್ಥಪಡಿಸುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಲಾಗುವುದು ಎಂದರು.

ಜನಗಾ ಗ್ರಾಪಂ ಉಪಾಧ್ಯಕ್ಷೆ ಭೀಮಾ ಕಮ್ಮಾರ, ಗ್ರಾಮದ ಪ್ರಮುಖರಾದ ಸುಭಾಸ ಕೋಲಕಾರ, ಕಸ್ತೂರಿ ವಡ್ಡರ, ಜಯಾ ಅಲ್ಲಾಕುಟಿಕರ್, ಹನುಮಂತ ಚಿನಗಿನಕೊಪ್ಪ, ಕೃಷ್ಣ ಕರ್ಲಕೊಪ್ಪ, ತುಕಾರಾಮ ಠೋಸುರ, ಪುಂಡ್ಲಿಕ್ ಗೌಡಾ, ತುಕಾರಾಮ ಮಡಿವಾಳ, ಗೋವಿಂದ ಕಂಡೇಕರ, ರವಿ ಹರಿಜನ, ಸಂತೋಷ ಘಟಕಾಂಬಳೆ, ಉಮೇಶ ಬೊಳಶೆಟ್ಟಿ, ನಾಗೇಂದ್ರ ಜಿಯೋಜಿ, ಚಂದ್ರಕಾಂತ ಕಲಬಾವಿ, ಸುಭಾನಿ ಹುಬ್ಬಳ್ಳಿ, ವಿಲಾಸ್ ಗಣಗಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net