

ಸೋಮವಾರಪೇಟೆ: ಬಸವೇಶ್ವರ ಪ್ರತಿಮೆಗೆ ಹಾನಿಯಾಗದಂತೆ ಕ್ರಮವಹಿಸಲು ಮಠಾಧೀಶರು ಹಾಗೂ ವೀರಶೈವ ಸಮಾಜ ಆಗ್ರಹಿಸಿದೆ.
ಪಟ್ಟಣದ ಮಡಿಕೇರಿ ರಸ್ತೆಯಲ್ಲಿ ಕಕ್ಕೆಹೊಳೆ ಸೇತುವೆ ಕಾಮಗಾರಿಗಾಗಿ ಮಣ್ಣು ತೆಗೆಯುತ್ತಿರುವುದರಿಂದ ಬಸವ ಪ್ರತಿಮೆ ಕುಸಿಯುವ ಭೀತಿ ಎದುರಾಗಿದೆ ಎಂದು ಅರೋಪಿಸಿ ಕಿರಿಕೋಡ್ಲಿ ಮಠಾಧೀಶರಾದ ಸದಾಶಿವ ಸ್ವಾಮೀಜಿ ಹಾಗೂ ವೀರಶೈವ ಸಮಾಜದ ಪ್ರಮುಖರು ಸ್ಥಳ ಪರಿಶೀಲಿಸಿ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಅನ್ನು ಭೇಟಿ ಮಾಡಿ, ಬಸವೇಶ್ವರ ಪ್ರತಿಮೆಗೆ ಯಾವುದೇ ಹಾನಿಯಾಗದಂತೆ ಜಾಗ್ರತೆ ವಹಿಸಬೇಕು ಎಂದು ಶ್ರೀ ಸದಾಶಿವ ಸ್ವಾಮೀಜಿ ತಿಳಿಸಿದರು.
ಈ ಸಂದರ್ಭ ಇಂಜಿನಿಯರ್ ಅರ್ಬಾಜ್ ಅಹಮ್ಮದ್ ಮಾತನಾಡಿ, ಹಲವು ದಿನಗಳಿಂದ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಪ್ರತಿಮೆಯ ಪಕ್ಕದಲ್ಲಿ ಜಾಗರೂಕತೆಯಿಂದ ಕೆಲಸ ಮಾಡುತ್ತಿದ್ದೇವೆ. ಆದರೆ ಮಣ್ಣು ಕುಸಿಯುತ್ತಿರುವುದರಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಅಗತ್ಯ ಬಿದ್ದರೆ ಪ್ರತಿಮೆಯನ್ನು ತಾತ್ಕಾಲಿಕವಾಗಿ ತೆಗೆಯಬೇಕಾಗುತ್ತದೆ ಎಂದು ವಿವರಿಸಿದರು.
ಪ್ರತಿಮೆಗೆ ಯಾವುದೇ ಹಾನಿಯಾಗದಂತೆ ಕಾರ್ಯ ನಿರ್ವಹಿಸುತ್ತೇವೆ. ಪ್ರತಿಮೆ ಜಾರದಂತೆ ಬೆಲ್ಟ್ ಹಾಕಿ ಎಳೆದು ಕಟ್ಟಲಾಗಿದೆ. ನಂತರ ದುರಸ್ತಿ ಕಾರ್ಯ ಮಾಡಿಕೊಡಲಾಗುತ್ತದೆ ಎಂದು ಗುತ್ತಿಗೆದಾರರಾದ ಆರ್.ಸಿ.ಗಣೇಶ್ ಹಾಗೂ ಚಂಗಪ್ಪ ತಿಳಿಸಿದರು.
ಅನಿವಾರ್ಯವಾದರೆ ತೊಂದರೆ ಆಗದಂತೆ, ಜಖಂಗೊಳ್ಳದಂತೆ ತಾತ್ಕಾಲಿಕವಾಗಿ ಪ್ರತಿಮೆಯನ್ನು ಸ್ಥಳಾಂತರಿಸಿ ಬಸವ ಜಯಂತಿಯೊಳಗಾಗಿ ಮರು ನಿರ್ಮಿಸಿಕೊಡಿ ಎಂದು ಸದಾಶಿವ ಸ್ವಾಮೀಜಿ ತಿಳಿಸಿದರು. ಇದಕ್ಕೆ ಇಂಜಿನಿಯರ್ ಹಾಗೂ ಗುತ್ತಿಗೆದಾರರು ಒಪ್ಪಿಗೆ ಸೂಚಿಸಿದರು.
ವೀರಶೈವ ಸಮಾಜದ ಯಜಮಾನ ಶಿವಕುಮಾರ್, ಶೆಟ್ರು ಮೃತ್ಯುಂಜಯ, ಕಾರ್ಯದರ್ಶಿ ನಾಗರಾಜ್, ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಸುಮಾ ಸುದೀಪ್ ಮತ್ತಿತರರು ಇದ್ದರು.
ಚಿತ್ರ:19ಎಸ್‌ಪಿಟಿ3
ಎಸ್.ಮಹೇಶ್.