ಅರಣ್ಯ ಒತ್ತುವರಿಯಾಗಿದ್ದರೆ ಕ್ರಮ ಜರುಗಿಸಿ

h24-ieshwar khandre
Published on

ಹುಬ್ಬಳ್ಳಿ: ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡವರು ಎಷ್ಟೇ ದೊಡ್ಡವರಿದ್ದರೂ ಕ್ರಮ ತೆಗೆದುಕೊಂಡು ತೆರವು ಕಾರ್ಯಾಚರಣೆ ಮಾಡಬೇಕು. ಒಂದು ವೇಳೆ ಒತ್ತುವರಿ ಮಾಡಿಕೊಂಡ ಭೂಮಿಯಲ್ಲಿ ಜೀವನ ಸಾಗಿಸುವವರು ಬಡವರಿದ್ದರೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಧಾರವಾಡ ಅರಣ್ಯ ವೃತ್ತದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅರಣ್ಯ ಭೂಮಿಯನ್ನು ಎ ಹಾಗೂ ಬಿ ವರ್ಗಗಳನ್ನಾಗಿ ವರ್ಗೀಕರಿಸಿ ತೆರವು ಮಾಡಿ ಮೀಸಲು ಅರಣ್ಯ ಪ್ರದೇಶ ಎಂದು ಘೋಷಿಸಬೇಕು ಎಂದರು.

ಹುಬ್ಬಳ್ಳಿ ವಿಮಾಣ ನಿಲ್ದಾಣದ ಬಳಿ ಇರುವ 26 ಎಕರೆ ಪ್ರದೇಶದಲ್ಲಿನ ವೃಕ್ಷ ಉದ್ಯಾನವನ್ನು ತ್ವರಿತಗತಿಯಲ್ಲಿ ನಿರ್ಮಿಸಬೇಕು. ಯಾವುದೇ ರೀತಿ ಹಣ ಸೋರಿಕೆಯಾಗದಂತೆ ನಿಗಾ ಇಡಬೇಕು. ಡಿಸೆಂಬರೊಳಗೆ ಉದ್ಯಾನ ಉದ್ಘಾಟನೆ ಮಾಡುವಂತಾಗಬೇಕು ಎಂದರು.

ಧಾರವಾಡದಲ್ಲಿ ಒಟ್ಟು 11 ಎಕರೆ ಅರಣ್ಯ ಭೂಮಿ ಒತ್ತುವರಿ ಮಾಡಲಾಗಿದೆ. ಗದಗನಲ್ಲಿ ಒಟ್ಟು ಮೂರು ಕಡೆ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡ ಪ್ರಕರಣಗಳಿದ್ದವು. ಅವುಗಳಲ್ಲಿ ಎರಡು ತೆರವುಗೊಳಿಸಲಾಗಿದೆ. ಕಲಘಟಗಿಯಲ್ಲಿ ಮೂರು ಎಕರೆ ಅರಣ್ಯ ಭೂಮಿ ತೆರವು ಮಾಡಲಾಗಿದೆ. ಧಾರವಾಡದಲ್ಲಿ ಮೂರು ಎಕರೆಗೂ ಕಡಿಮೆ ಅರಣ್ಯ ಭೂಮಿ ಒತ್ತುವರಿ ಪ್ರಕರಣಗಳು 234 ಇವೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಈಶ್ವರ ಖಂಡ್ರೆ ಇವುಗಳನ್ನು ಕಂದಾಯ ಇಲಾಖೆಯೊಂದಿಗೆ ಪರಿಶೀಲಿಸುವಂತೆ ತಿಳಿಸಿದರು.

ಹಾವೇರಿ ವ್ಯಾಪ್ತಿಯ ಅರಣ್ಯ ಭಾಗದಲ್ಲಿ ಕೃಷ್ಣಮೃಗಗಳು ರೈತರ ಬೆಳೆ ಹಾನಿ ಮಾಡುತ್ತಿವೆ ಎಂಬ ದೂರುಗಳು ಕೇಳಿ ಬರುತ್ತಿವೆ. ಆ ಭಾಗದಲ್ಲಿ ಕೃಷ್ಣ ಮೃಗಗಳ ಸರ್ವೇ ಕಾರ್ಯ ಮಾಡಬೇಕು. ಬೆಳೆ ಹಾನಿಗೊಳಗಾದ ರೈತರಿಗೆ ಇಲಾಖೆಯಿಂದ ಪರಿಹಾರ ಒದಗಿಸಬೇಕು ಎಂದರು.

ರೇಡ್ ಹೆಚ್ಚಳ ಮಾಡಿ: ನಗರದ ಕೆರೆ, ರಸ್ತೆ ಅಂಚುಗಳಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಕಾಣುತ್ತಿದೆ. ಈವರೆಗೂ ಎಷ್ಟು ರೇಡ್ ಮಾಡಲಾಗಿದೆ ಎಂದು ಸಚಿವರು, ಪರಿಸರ ಅಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ ಧಾರವಾಡದಲ್ಲಿ ಒಟ್ಟು 252 ರೇಡ್‌ಗಳನ್ನು ಮಾಡಿ 3.80 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಈಶ್ವರ ಖಂಡ್ರೆ, ಕನಿಷ್ಠ ಸಾವಿರ ರೇಡ್‌ಗಳನ್ನು ಮಾಡಬೇಕು. ಇಲ್ಲದಿದ್ದರೆ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಬರುತ್ತದೆ. ಇದಕ್ಕೆ ಕಡಿವಾಣ ಹಾಕಲು ಪ್ಲಾಸ್ಟಿಕ್ ಮೂಲ ತಿಳಿಯಬೇಕು ಎಂದು ತಾಕೀತು ಮಾಡಿದರು.

ಪಾಲಿಕೆ ಆಯುಕ್ತರ ಮೇಲೆ ಕೇಸ್ ಹಾಕಿ: ಧಾರವಾಡದಲ್ಲಿ ಒಟ್ಟು 33 ಕೆರೆಗಳಿವೆ. ಆ ಕೆರೆಗಳ ಪೈಕಿ 9 ಕೆರೆಗಳಿಗೆ ಧಾರವಾಡ ನಗರ ಪ್ರದೇಶದ ಕಲುಷಿತ ನೀರು ಸೇರುತ್ತಿದೆ. ಈ ಬಗ್ಗೆ ಪಾಲಿಕೆ ಆಯುಕ್ತರಿಗೆ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ. ಅವರ ಮೇಲೆ ಕೇಸ್ ದಾಖಲಿಸಲಾಗಿದೆ ಎಂದು ಪರಿಸರ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು. ಪಾಲಿಕೆ ಆಯುಕ್ತರ ಮೇಲೆ ಐದು ಪ್ರಕರಣಗಳು ದಾಖಲಾದರೂ ಕ್ರಮ ಕೈಗೊಳ್ಳಲು ಹಿಂದೇಟು ಹಾಕಿದರೆ ಅವರ ಮೇಲೆ ಮತ್ತಷ್ಟು ಕೇಸ್ ಹಾಕಿ ಎಂದು ಸಚಿವರು ಸೂಚಿಸಿದರು.

44 ಕಿ.ಮೀ. ಆನೆ ತಡೆ ಕಂದಕ ಅಗತ್ಯ: ಕಲಘಟಗಿಯಲ್ಲಿ 19 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವಿದೆ. ಈ ಭಾಗದಲ್ಲಿ 47 ಕಿ.ಮೀ. ಆನೆ ತಡೆ ಕಂದಕವಿದ್ದು, ಇನ್ನೂ 44 ಕಿ.ಮೀ. ಆನೆ ತಡೆ ಕಂದಕ ನಿರ್ಮಿಸುವ ಅವಶ್ಯಕತೆ ಇದೆ. ಇಲಾಖೆಗೆ ವಾಹನದ ಅವಶ್ಯಕತೆ ಇದೆ ಎಂದು ಅಧಿಕಾರಿಗಳು ಸಚಿವರಿಗೆ ತಿಳಿಸಿದರು. ಮಾಹಿತಿ ಪಡೆದ ಸಚಿವರು, ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ, ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net