ಸ್ವಚ್ಛತೆ ಇಲ್ಲದಿದ್ದರೆ ಕ್ರಮ ತೆಗೆದುಕೊಳ್ಳಿ

gokul new BS
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಬಸ್ ನಿಲ್ದಾಣ ಹಾಗೂ ಅಲ್ಲಿಯ ಶೌಚಗೃಹದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳದಿದ್ದರೆ ವಿಭಾಗೀಯ ನಿಯಂತ್ರಣಾಧಿಕಾರಿ (ಡಿವಿಷನಲ್ ಕಂಟ್ರೋಲರ್)ಗಳ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಸುಮಾರು 23.48 ಕೋಟಿ ರೂ. ವೆಚ್ಚದಲ್ಲಿ ನವೀಕರಿಸಲ್ಪಟ್ಟ ಇಲ್ಲಿಯ ಗೋಕುಲ ರಸ್ತೆಯ ಕೇಂದ್ರ ಬಸ್ ನಿಲ್ದಾಣವನ್ನು ಶುಕ್ರವಾರ ಉದ್ಘಾಟಿಸಿ, ಅಪಘಾತ/ ಅಪರಾಧ ರಹಿತ ಸೇವೆ ಸಲ್ಲಿಸಿದ ಸಂಸ್ಥೆಯ ಚಾಲನಾ ಸಿಬ್ಬಂದಿಗಳಿಗೆ ಬೆಳ್ಳಿ ಪದಕ ವಿತರಿಸಿ ಮಾತನಾಡಿದ ಅವರು, ಬಸ್ ನಿಲ್ದಾಣದ ಶೌಚಗೃಹದ ಅವ್ಯವಸ್ಥೆ ಬಗ್ಗೆ ಪ್ರಯಾಣಿಕರಿಂದ ಪದೇ ಪದೆ ದೂರುಗಳು ಕೇಳಿ ಬರುತ್ತದೆ. ಬಸ್ ನಿಲ್ದಾಣದ ಪರಿಸರ ಹಾಗೂ ಶೌಚಗೃಹ ಕ್ಲೀನ್ ಇರಬೇಕು. ಪ್ರಯಾಣಿಕರು ಸಂತೋಷ ಪಡುವಂಥ ವಾತಾವರಣ ಇರಬೇಕು ಎಂದರು.

ಇಲ್ಲಿಯ ಕೇಂದ್ರ ಬಸ್ ನಿಲ್ದಾಣ ಹಾಗೂ ನಗರ ಮತ್ತು ಉಪ ನಗರ ಸಾರಿಗೆ ಬಸ್ ನಿಲ್ದಾಣ (ಚನ್ನಮ್ಮ ವೃತ್ತದ ಬಳಿ)ಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಆಟೋ ರಿಕ್ಷಾ ನಿಲುಗಡೆಗೆ ಅವಕಾಶ ಕಲ್ಪಿಸಲು ಪೊಲೀಸ್ ಇಲಾಖೆಗೆ ಸೂಚಿಸುತ್ತೇನೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮಾತನಾಡಿ, ಗ್ಯಾರಂಟಿ ಯೋಜನೆಗಳಡಿ 5 ವರ್ಷಗಳಲ್ಲಿ ಜನರ ಕೈಗೆ 3 ಲಕ್ಷ ಕೋಟಿ ರೂ. ಸೇರುತ್ತದೆ. ಈ ಹಣವನ್ನು ಜನರು ಎಲ್ಲಿಯೂ ಬ್ಯಾಂಕ್​ನಲ್ಲಿ ಎಫ್​ಡಿ (ನಿಶ್ಚಿತ ಠೇವಣಿ) ಇಡುವುದಿಲ್ಲ. ಮಾರುಕಟ್ಟೆಯಲ್ಲಿ ಚಲಾವಣೆ ಆಗುತ್ತಿರುವುದರಿಂದ ಜಿಎಸ್​ಟಿ ಸಂಗ್ರಹ, ಎಸ್​ಜಿಡಿಪಿ ಬೆಳವಣಿಗೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ರಾಜ್ಯದ ಜನರ ಸರಾಸರಿ ತಲಾ ಆದಾಯವು ಹೆಚ್ಚಳವಾಗಿದೆ ಎಂದರು.

ವಾಕರಸಾ ಸಂಸ್ಥೆ ಅಧ್ಯಕ್ಷ ಭರಮಗೌಡ ಕಾಗೆ ಮಾತನಾಡಿ, ಸಾರಿಗೆ ನೌಕರರ ವೇತನ ಪರಿಷ್ಕರಣೆ, ಇತ್ಯಾದಿ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರ ಬಹಳ ವಿಳಂಬ ಮಾಡಬಾರದು. ತ್ವರಿತವಾಗಿ ಇತ್ಯರ್ಥ ಪಡಿಸಿ ನೌಕರರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಗ್ಯಾರಂಟಿ ಯೋಜನೆಯಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಆದರೆ, ಬಸ್​ಗಳ ಕೊರತೆ ಇದೆ. ಹುಬ್ಬಳ್ಳಿಯ ಬಸ್ ನಿಲ್ದಾಣಗಳಲ್ಲಿ ಆಟೋ ರಿಕ್ಷಾಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net