

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ನಗರದ ಕೇಶ್ವಾಪುರ ನವೀನ ಪಾರ್ಕ್ನಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದ ಜನರು ನಿತ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬಡಾವಣೆಯಲ್ಲಿ ರಸ್ತೆ, ಉದ್ಯಾನ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ನವೀನ ಪಾರ್ಕ್ ನಿವಾಸಿಗಳ ಸಂಘ ಆಗ್ರಹಿಸಿದೆ.
ಸಂಘದ ಅಧ್ಯಕ್ಷ ಡಾ. ವಿ.ಎಸ್.ವಿ. ಪ್ರಸಾದ ನೇತೃತ್ವದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಅವರಿಗೆ ಬೇಡಿಕೆಗಳ ಮನವಿ ಸಲ್ಲಿಸಲಾಯಿತು.
ಖಾಲಿ ನಿವೇಶನಗಳಲ್ಲಿ ಗಿಡಗಂಟಿಗಳು ಬೆಳದಿದ್ದು, ಕಸ ಸಹ ತುಂಬಿವೆ. ಇದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆಯಾಗುತ್ತಿದ್ದು, ಹುಳ ಹುಪ್ಪಡಿಗಳು ಮನೆಯೊಳಗೆ ನುಗ್ಗುತ್ತಿವೆ. ಪಾಲಿಕೆ ಅಧಿಕಾರಿಗಳು ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಲು ಮಾಲೀಕರಿಗೆ ನೋಟಿಸ್ ನೀಡಲು ಕ್ರಮ ಕೈಗೊಳ್ಳಬೇಕು. ಹಣದ ಕೊರತೆಯಿಂದ ನವೀನ ಪಾರ್ಕ್ ಬಡಾವಣೆಯ ಉದ್ಯಾನದ ಕಂಪೌಂಡ್ ಕೆಲಸ ಅರ್ಧಕ್ಕೆ ನಿಲ್ಲಿಸಲಾಗಿದೆ. ಕಂಪೌಂಡ್ ನಿರ್ವಣಕ್ಕೆ ಹಣ ಬಿಡುಗಡೆಯ ಜತೆಗೆ ಉದ್ಯಾನ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ರಸ್ತೆ ಪಕ್ಕದ ಗಟಾರಗಳಲ್ಲಿ ಕಸ ಕಡ್ಡಿ, ಮಣ್ಣು, ಇತ್ಯಾದಿ ತ್ಯಾಜ್ಯಗಳು ತುಂಬಿದ್ದು ಮಳೆ ನೀರು ಹರಿಯದೇ ಒಂದೆಡೆ ಸಂಗ್ರಹವಾಗಿ ದುರ್ವಾಸನೆ ಹಬ್ಬಿದೆ. ಸೊಳ್ಳೆಗಳ ಹಾವಳಿ ಜಾಸ್ತಿಯಾಗಿದ್ದು, ಡೆಂಘೆ ಭೀತಿ ಆವರಿಸಿದೆ. ನವೀನ ಪಾರ್ಕ್ 3ನೇ ಮುಖ್ಯ ರಸ್ತೆಯ ಸಿಸಿ ಕಾಮಗಾರಿಯನ್ನು ಪೂರ್ಣಗೊಳಿಸದೇ ಅರ್ಧಕ್ಕೆ ನಿಲ್ಲಿಸಲಾಗಿದೆ. ರಸ್ತೆಯ ಮೇಲೆ ಕಲ್ಲು, ಮಣ್ಣು ಹಾಗೆಯೇ ಉಳಿಸಿರುವುದರಿಂದ ಸಾರ್ವಜನಿಕರಿಗೆ ತಿರುಗಾಡಲು ತೊಂದರೆಯಾಗಿದೆ. ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಬಡಾವಣೆಗೆ ರಾತ್ರಿ 1 ಗಂಟೆಯಿಂದ ನಸುಕಿನ ಜಾವ 5 ಗಂಟೆಯ ವೇಳೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಬೆಳಗ್ಗೆ ವೇಳೆ ನೀರು ಸರಬರಾಜು ಮಾಡಲು ಸಬಂಧ ಪಟ್ಟ ಇಲಾಖೆ ಹಾಗೂ ಅಧಿಕಾರಿಗಳಿಗೆ ದೂರು ನೀಡಿದರೂ ಏನೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನವೀನ ಪಾರ್ಕ್ 2ನೇ ಅಡ್ಡ ರಸ್ತೆಯಲ್ಲಿ ಗುಂಡಿಗಳು ನಿರ್ವಣವಾಗಿದ್ದು, ರಸ್ತೆ ಹದಗೆಟ್ಟು ಹೋಗಿದೆ. ಬಡಾವಣೆಯಲ್ಲಿ ಭಾರಿ ಗಾತ್ರದ ವಾಹನಗಳು ನಿತ್ಯ ಓಡಾಡುತ್ತಿರುವುದರಿಂದ ನಿವಾಸಿಗಳಿಗೆ, ಮಕ್ಕಳಿಗೆ ತೊಂದರೆಯಾಗುತ್ತಿವೆ. ಭಾರಿ ವಾಹನಗಳ ಓಡಾಟವನ್ನು ನಿಯಂತ್ರಿಸಲು ಹೈಟ್ ಗೇಜ್ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.