ಜನ ಜಾಗೃತಿಗೆ ಕ್ರಮ ಕೈಗೊಳ್ಳಿ

DC Meeting
Published on

ಕಾರವಾರ: ಕಸದಿಂದ ರಸ ಮಾಡುವ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರು ನಿರ್ದೇಶನ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಘನತ್ಯಾಜ್ಯ ವಸ್ತು ವಿಲೇವಾರಿ ಕುರಿತ ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ನಗರ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸ ಪರಿಣಾಮಕಾರಿಯಾಗಿ ವಿಲೇವಾರಿ ಮಾಡುವ ಹೊಣೆ ಸ್ಥಳೀಯ ನಗರ ಸಂಸ್ಥೆಗಳದಾಗಿರುತ್ತದೆ. ಈ ನಿಟ್ಟಿನಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದರು.

ನಾಗರಿಕರು ಮನೆಯಲ್ಲೇ ತ್ಯಾಜ್ಯ ವಿಂಗಡಿಸಿ ಕಸದ ಗಾಡಿಗೆ ನೀಡಬೇಕು. ಇದರಿಂದ ತ್ಯಾಜ್ಯ ಮರುಬಳಕೆಗೆ ಸಹಕಾರಿಯಾಗಿದೆ. ಹಸಿ ಕಸದಿಂದ ನಮ್ಮ ಮನೆ, ಟೆರೇಸ್ ಗಾರ್ಡನ್, ಹೊಲಗಳಿಗೆ ಕಾಂಪೋಸ್ಟ್ ಗೊಬ್ಬರ ತಯಾರು ಮಾಡಿಕೊಳ್ಳಬಹುದು. ಅದರಿಂದ ನಿಮಗೂ ಅನುಕೂಲ, ಸಂಗ್ರಹಿಸುವುದಕ್ಕೂ ಅನುಕೂಲ ಕಸ ವಿಲೇವಾರಿ ಘಟಕಕ್ಕೆ ಹೋಗುವ ಕಸವನ್ನು ಕಡಿಮೆ ಮಾಡಲು ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಎಂದರು.

ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಸಂತೋಷ ಬಿ.ಕೆ ಅವರು, ಮಾತನಾಡಿ ಘನತಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಎಲ್ಲ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ಹಾಗೂ ಘನತಾಜ್ಯ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲು ಕ್ರಮಕೈಗೊಳ್ಳಬೇಕು ಎಂದು ಅವರು ಹೇಳಿದರು.

ಘನ ತ್ಯಾಜ್ಯ ಘಟಕಕ್ಕೆ ಅಧಿಕಾರಿಗಳು ಆಗಾಗ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅವರು ಹೇಳಿದರು. ಏಕ ಬಳಕೆ ಪ್ಲಾಸ್ಟಿಕ್ ನಿಷೇಧವಿದ್ದರೂ ಕೆಲವೊಂದು ಕಡೆ ಅಂಗಡಿಗಳಲ್ಲಿ ಬಳಕೆ ಮತ್ತು ಮಾರಾಟ ಮಾಡಲಾಗುತ್ತಿದೆ. ಅಂತಹವರ ಮೇಲೆ ದಂಡ ವಿಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು. ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಸ್ಟೆಲ್ಲಾ ವರ್ಗಿಸ್, ಉಪ ಪರಿಸರ ಅಧಿಕಾರಿ ಗಣಪತಿ ಹೆಗಡೆ ಇದ್ದರು.

ದೇವರಾಜ ಅರಸು ಜನ್ಮದಿನ

ಡಿ.ದೇವರಾಜು ಅರಸು ಅವರ 108 ನೇ ಜನ್ಮ ದಿನಾಚರಣೆಯನ್ನು ಆ. 20ರಂದು ವಿಜೃಂಭಣೆಯಿಂದ ಆಚರಿಸಲು ಅಗತ್ಯ ಸಿದ್ದತೆಗೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಿ.ದೇವರಾಜು ಅರಸು ಜನ್ಮದಿನದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಂದು ಬೆಳಗ್ಗೆ 10 ಗಂಟೆಗೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ವಿವಿಧ ಕಲಾ ತಂಡಗಳೊಂದಿಗೆ ಡಿ.ದೇವರಾಜ ಅರಸು ಅವರ ಭಾವಚಿತ್ರದ ಮೆರವಣಿಗೆ ನಡೆಯಲಿದೆ. 11 ಗಂಟೆಗೆ ಜಿಲ್ಲಾ ರಂಗಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು. ಎಸಿ ಜಯಲಕ್ಷ್ಮೀ ರಾಯಕೋಡ, ಜಿಪಂ ಲೆಕ್ಕಾಧಿಕಾರಿ ಸತೀಶ ಪವಾರ್, ಕದರವೇ ಜಿಲ್ಲಾಧ್ಯಕ್ಷ ಎಲಿಷಾ ಎಲಕಪಾಟಿ, ನಗರಸಭೆ ಸದಸ್ಯ ಹನುಮಂತ ತಳವಾರ್, ಬಿಸಿಎಂ ಜಿಲ್ಲಾಧಿಕಾರಿ ಸತೀಶ, ತಹಸೀಲ್ದಾರ್ ನಿಶ್ಚಲ ನರೋನಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net