134 ಪೌರ ಕಾರ್ವಿುಕರ ನೇರ ನೇಮಕಾತಿಗೆ ಕ್ರಮ

abbayya meeting 2
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯ ಅಧಿಕಾರಿಗಳು 543 ಪೌರಕಾರ್ವಿುಕರ ನೇರ ನೇಮಕಾತಿಗೆ ಕ್ರಮ ವಹಿಸಬೇಕು. ಮೊದಲ ಹಂತದ 134 ಪೌರ ಕಾರ್ವಿುಕರ ನೇರ ನೇಮಕಾತಿಗೆ ಸಂಬಂಧಪಟ್ಟಂತೆ ಅಂತಿಮ ಪಟ್ಟಿಯನ್ನು ನಾಲ್ಕು ದಿನಗಳಲ್ಲಿ ಹೊರಡಿಸಬೇಕೆಂದು ಎಂದು ಶಾಸಕ, ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಸೂಚಿಸಿದರು.

ಇಲ್ಲಿಯ ಪಾಲಿಕೆ ಆವರಣದಲ್ಲಿರುವ ಜನ ಸಂಪರ್ಕ ಕಚೇರಿಯಲ್ಲಿ ಪಾಲಿಕೆ ಅಧಿಕಾರಿಗಳೊಂದಿಗೆ ಶನಿವಾರ ಸಭೆ ನಡೆಸಿದ ಅವರು, 134 ಪೌರ ಕಾರ್ವಿುಕ ಹುದ್ದೆಗಳಿಗೆ ಇದೇ ಬುಧವಾರ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡುವುದು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಶೀಘ್ರದಲ್ಲಿಯೇ ನೇಮಕಾತಿ ಪತ್ರಗಳನ್ನು ವಿತರಿಸಬೇಕು. ಎರಡನೇ ಹಂತದಲ್ಲಿ 157 ಹುದ್ದೆಗಳಿಗೆ ಒಂದು ವಾರದಲ್ಲಿ ಅಧಿಸೂಚನೆ ಹೊರಡಿಸಬೇಕು. ಮೂರು ತಿಂಗಳಲ್ಲಿ ಅಂತಿಮ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಬೇಕು. ಮೂರನೇ ಹಂತದಲ್ಲಿ 252 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಲು ಕ್ರಮ ವಹಿಸಬೇಕು ಎಂದು ಅವರು ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಅವರಿಗೆ ಸೂಚನೆ ನೀಡಿದರು.

ಪೌರ ಕಾರ್ವಿುಕರಿಗೆ ಯಾವುದೇ ರೀತಿಯಲ್ಲಿ ಸಮಸ್ಯೆಗಳಾಗಬಾರದು. ವೇತನ, ಸಮವಸ್ತ್ರ, ಉಪಹಾರ ಹಾಗೂ ಇತರೆ ಸೌಲಭ್ಯಗಳಲ್ಲಿ ಕೊರತೆಯಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಪ್ರತಿ ತಿಂಗಳು 5ನೇ ತಾರೀಖಿನ ಒಳಗಾಗಿ ವೇತನ ಪಾವತಿ ಮಾಡಬೇಕು. ಪೌರ ಕಾರ್ವಿುಕರ ಅನುದಾನ ಸರಿಯಾದ ರೀತಿಯಲ್ಲಿ ಸದ್ಬಳಕೆಯಾಗಬೇಕು. ಮೂರು ತಿಂಗಳಿಗೊಮ್ಮೆ ಪೌರಕಾರ್ವಿುಕರ ಸಮಸ್ಯೆ ಆಲಿಸುವ ಕುರಿತು ಸಭೆ ನಡೆಸಬೇಕೆಂದರು.

ಮಂಟೂರು ರಸ್ತೆಯಲ್ಲಿ ಪೌರ ಕಾರ್ವಿುಕರಿಗಾಗಿಯೇ ನಿರ್ವಿುಸಲಾಗುತ್ತಿರುವ 320ಮನೆಗಳ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಜನೆವರಿಯಲ್ಲಿ ಮುಖ್ಯಮಂತ್ರಿಯವರ ಕೈಯಿಂದ ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರಿಸುವ ಉದ್ದೇಶವಿದ್ದು ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಬೇಕು. ದುರ್ಗದ ಬೈಲ್ ಪ್ರದೇಶದಲ್ಲಿ ಪಾಲಿಕೆ ವ್ಯಾಪ್ತಿಯ ಪ್ರದೇಶವನ್ನು ಅತಿಕ್ರಮಣ ಮಾಡಿಕೊಂಡಿದ್ದರೆ ತೆರವುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪಾಲಿಕೆ ಉಪ ಆಯುಕ್ತ ಆನಂದ ಕಲ್ಲೋಳಿಕರ್, ಕಾರ್ಯನಿರ್ವಾಹಕ ಇಂಜಿನಿಯರ್ ಆರ್. ವಿಜಯ್ಕುಮಾರ್, ಅಧಿಕಾರಿಗಳಾದ ಸಂತೋಷ ಯರಂಗಳಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net