ಶುದ್ಧ ನೀರು ಸರಬರಾಜಿಗೆ ಕ್ರಮ ವಹಿಸಿ: ನಗರಪಾಲಿಕೆ ಆಯುಕ್ತರಿಗೆ ಶಾಸಕ ಟಿ.ಎಸ್.ಶ್ರೀವತ್ಸ ಪತ್ರ

Published on

ಮೈಸೂರು: ಕೆ.ಸಾಲುಂಡಿಯಲ್ಲಿ ನಡೆದ ಘಟನೆ ನಗರದಲ್ಲಿ ಅಗುವ ಮುನ್ನವೇ ಎಚ್ಚೆತ್ತು ಶುದ್ಧ ನೀರು ಸರಬರಾಜಿಗೆ ಕ್ರಮಕೈಗೊಳ್ಳಬೇಕು ಎಂದು ಶಾಸಕ ಟಿ.ಎಸ್.ಶ್ರೀವತ್ಸ ನಗರಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಕೆ.ಆರ್.ಕ್ಷೇತ್ರಕ್ಕೆ ಒಳಪಡುವ ಶ್ರೀರಾಂಪುರ, ಚಿಕ್ಕಹರದನಹಳ್ಳಿ, ಶಿವಪುರ, ಎಸ್‌ಬಿಎಂ, ಮಧುವನ ಬಡಾವಣೆ, ಬೆಮೆಲ್ ಬಡಾವಣೆ, ಅರವಿಂದನಗರ, ಕುವೆಂಪುನಗರ ಬಸ್ ಡಿಫೋ ಹಿಂಭಾಗ ಸೇರಿದಂತೆ ಹಲವು ಪ್ರದೇಶದಲ್ಲಿ ನಗರಪಾಲಿಕೆ ಸರಬರಾಜು ಮಾಡುವ ಕೊಳಾಯಿ ನೀರಿನಲ್ಲಿ ಮಣ್ಣು ಮಿಶ್ರಿತಗೊಳ್ಳುತ್ತಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಪಾದಯಾತ್ರೆ ಸಮಯದಲ್ಲಿ ಜನರು ಕುಡಿಯುವ ನೀರು ಹಿಡಿದಿಟ್ಟುಕೊಂಡಾಗ ಪಾತ್ರೆಗಳ ತಳಭಾಗದಲ್ಲಿ ಮಣ್ಣು ಶೇಖರಣೆಯಾಗಿರುವ ಅಂಶ ಗಮನಕ್ಕೆ ಬಂದಿದ್ದು, ಇದನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಈವರೆಗೂ ಯಾವುದೇ ಪ್ರಯೋಜನ ಅಗಿಲ್ಲ ಎಂದು ದೂರಿದ್ದಾರೆ.
ಸಾಲುಂಡಿಯಲ್ಲಿ ಕಲುಷಿತ ನೀರು ಕುಡಿದು ಜನರು ತೊಂದರೆಗೀಡಾಗಿರುವುದರಿಂದ ನಗರದ ಜನರು ಭಯಭೀತರಾಗಿದ್ದು, ಏನಾದರೂ ಅನಾಹುತ ಅಗುವ ಮುನ್ನವೇ ಸಂಬಂಧಪಟ್ಟವರು ಕ್ರಮಕೈಗೊಳ್ಳಬೇಕು. ಮಣ್ಣು ಮಿಶ್ರಿತ ನೀರನ್ನು ತಡೆದು ಶುದ್ಧ ನೀರು ಕೊಡಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net