ಗಡುವಿನೊಳಗೆ ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳ ಕುರಿತು ಕ್ರಮ ಕೈಗೊಂಡು ವರದಿ ಸಲ್ಲಿಸಿ: ಎಸ್‌ಎಚ್‌ಆರ್‌ಸಿ ಅಧ್ಯಕ್ಷ ಎಲ್.ನಾರಾಯಣಸ್ವಾಮಿ ಸೂಚನೆ

12
Published on

ಮೈಸೂರು: ಮಾನವ ಹಕ್ಕು ಉಲ್ಲಂಘನೆ ಕುರಿತು ಪ್ರಸ್ತುತ ಬಾಕಿ ಉಳಿದಿರುವ ಪ್ರಕರಣಗಳಿಗೆ ಪ್ರತ್ಯೇಕ ಅಂತಿಮ ದಿನಾಂಕವನ್ನು ನೀಡಲಾಗಿದ್ದು, ಆ ದಿನಾಂಕದೊಳಗೆ ಕ್ರಮ ಕೈಗೊಂಡು ವರದಿ ಸಲ್ಲಿಸಬೇಕು ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಎಲ್.ನಾರಾಯಣಸ್ವಾಮಿ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಮಾನವ ಹಕ್ಕುಗಳ ಸಾಕ್ಷರತೆ ಕುರಿತ ಸಂವಾದಾತ್ಮಕ ಅಧಿವೇಶನ ಸಭೆಯಲ್ಲಿ ಅವರು ಮಾತನಾಡಿದರು.
ಮಾನವಹಕ್ಕುಗಳ ಉಲ್ಲಂಘನೆ ಪ್ರಕರಣಗಳನ್ನು ಬಹು ಬೇಗನೆ ಇತ್ಯರ್ಥಪಡಿಸಿ, ನೊಂದವರಿಗೆ ನ್ಯಾಯ ದೊರೆಕಿಸಿಕೊಡಬೇಕು. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಈಗಲೂ ಇರುವ ಸಾಮಾಜಿಕ ಬಹಿಷ್ಕಾರದಂತಹ ಪ್ರಕರಣಗಳ ಬಗ್ಗೆ ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಬಡವರು, ನಿರ್ಗತಿಕರಿಗೆ ಸಂಬಂಧಿಸಿದ ಪ್ರಕರಣಗಳು ತಮ್ಮ ಮುಂದೆ ಬಂದಾಗ ಮೊದಲ ಆದ್ಯತೆ ನೀಡಬೇಕು. ಜನರು ಅಧಿಕಾರಿಗಳನ್ನು ನಂಬಿ ಬಂದಿರುತ್ತಾರೆ. ಅಂತಹವರಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ. ಆದರೆ ಜಿಲ್ಲೆಯಲ್ಲಿ ಕೆಲವು ಪ್ರಕರಣಗಳನ್ನು ಇನ್ನೂ ಬಗೆಹರಿಸಿ ವರದಿ ನೀಡಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅಧ್ಯಕ್ಷರು, ತಕ್ಷಣ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ತಿಳಿಸಿದರು.
ಮಾನವ ಹಕ್ಕುಗಳ ಆಯೋಗದ ಸದಸ್ಯ ಎಸ್.ಕೆ.ವೆಂಟಗೋಡಿ ಮಾತನಾಡಿ, ಪ್ರಕರಣಗಳು ಪರಿಹಾರವಾದ ಕೂಡಲೇ ಅದರ ವರದಿಯನ್ನು ಸಲ್ಲಿಸಬೇಕು. ಆಗ ನಾವು ಮುಂದಿನ ಕ್ರಮ ಕೈಗೊಳ್ಳಬಹುದು. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಆದಷ್ಟು ಬೇಗ ಸಮಸ್ಯೆಗಳನ್ನು ಬಗೆಹರಿಸಿ ವರದಿ ಸಲ್ಲಿಸಬೇಕು ಎಂದರು.
ಮಾನವ ಹಕ್ಕುಗಳ ಆಯೋಗದ ಮತ್ತೊಬ್ಬ ಸದಸ್ಯ ಡಾ.ಟಿ.ಶ್ಯಾಮಭಟ್ ಮಾತನಾಡಿ, ಗ್ರಾಮೀಣ ಪ್ರದೇಶದ ಪ್ರಕರಣಗಳಿಗೆ ಖುದ್ದು ಅಧಿಕಾರಿಗಳೇ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು. ಇದರಿಂದ ಜನರಿಗೆ ಸರಿಯಾದ ನ್ಯಾಯ ದೊರಕಿಸಲು ನೆರವಾಗುತ್ತದೆ ಎಂದರು.
ಮೈಸೂರು ಜಿಲ್ಲೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಸಂಬಂಧ ದಾಖಲಾದ 307 ಪ್ರಕರಣಗಳಲ್ಲಿ 33 ಪ್ರಕರಣಗಳ ಬಗ್ಗೆ ಸ್ಧಳದಲ್ಲಿ ವಿಚಾರಣೆ ನಡೆಸಿದ್ದಲ್ಲದೆ 25 ಪ್ರಕರಣಗಳ ಇತ್ಯರ್ಥಪಡಿಸಲಾಯಿತು. ಸಭೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net