

ತರೀಕೆರೆ: ತಾಲೂಕಿನ ತ್ಯಾಗದಬಾಗಿ ಗ್ರಾಮಕ್ಕೆ ಲಿಂಗದಹಳ್ಳಿ ಫೀಡರ್ ಮೂಲಕ ಪೂರೈಕೆಯಾಗುತ್ತಿರುವ ವಿದ್ಯುತ್ ಕಳವು ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಮೆಸ್ಕಾಂ ಉಪ ವಿಭಾಗೀಯ ಕಚೇರಿ ಎಇಇ ಮಂಜುನಾಥ್ ನಾಯ್ಕಗೆ ಮನವಿ ಸಲ್ಲಿಸಿದರು.
ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಎಚ್.ಎಸ್.ಸೋಮಶೇಖರಯ್ಯ ಮಾತನಾಡಿ, ತ್ಯಾಗದಬಾಗಿ ಗ್ರಾಮದ ಜತೆ ಇಲ್ಲಿನ ಕೃಷಿ ಭೂಮಿಯಲ್ಲಿ ಅಳವಡಿಸಿರುವ ಐಪಿ ಸೆಟ್‌ಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ಮೆಸ್ಕಾಂ ಅಧಿಕಾರಿ, ಸಿಬ್ಬಂದಿ ಸಮರ್ಥನೆ ನೀಡುತ್ತಿದ್ದಾರೆ. ಆದರೆ ಕಳೆದ ಎರಡು ತಿಂಗಳಿನಿಂದ ಸರಬರಾಜು ಮಾಡುತ್ತಿರುವ ಬಹುತೇಕ ವಿದ್ಯುತ್ ಕಳವಾಗುತ್ತಿದೆ ಎಂದು ಆರೋಪಿಸಿದರು.
ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ತೀವ್ರ ಸಮಸ್ಯೆ ಎದುರಾಗಿದೆ. ಈ ಕೃತ್ಯದಲ್ಲಿ ಸ್ಥಳೀಯವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಾಖಾಧಿಕಾರಿಗಳು ಮತ್ತು ಲೈನ್‌ಮನ್‌ಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ವಿದ್ಯುತ್ ಕಳವಾಗಿರುವ ಕುರಿತು ಸಮಗ್ರ ಪರಿಶೀಲನೆ ನಡೆಸಿ ತಪ್ಪಿತಸ್ಥ ಅಧಿಕಾರಿ ಸಿಬ್ಬಂದಿ ಮೇಲೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಗ್ರಾಮಸ್ಥರಾದ ಶಶಿಧರ್, ಬಸವರಾಜ್, ಮಹೇಶ, ಸುನೀಲ್‌ಕುಮಾರ್, ಮದನ್, ನಂದೀಶ, ಮಹಾಂತೇಶ್ ಮತ್ತಿತರರಿದ್ದರು.