

ಮಡಿಕೇರಿ: ತಲಕಾವೇರಿ ನೈಜ ಭಕ್ತರ ಭಾವನೆಗೆ ಬೆಲೆಕೊಡದ ಕೊಡಗು ಜಿಲ್ಲಾ ಅಪರ ಜಿಲ್ಲಾಧಿಕಾರಿ ಮತ್ತು ಭಾಗಮಂಡಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರ ವಿರುದ್ಧ ಕ್ರಮ ಕೈಕೊಳ್ಳಬೇಕೆಂದು ಆಗ್ರಹಿಸಿ ಕೊಡವಾಮೆರ ಕೊಂಡಾಟ ಸಂಘಟನೆ ವತಿಯಿಂದ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ದೂರು ನೀಡಲಾಗಿದೆ ಎಂದು ಸಂಘಟನೆ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ತಿಳಿಸಿದ್ದಾರೆ.
ಕೊಡಗಿನ ಕಾವೇರಿ ಮಾತೆ ಕೊಡವರ ಆದಿಮಾತೆ/ಕುಲಮಾತೆಯಾಗಿದೆ. ಕೊಡವರು ಮತ್ತು ತಾಯಿಕಾವೇರಿಯ ಸಂಬಂಧ ತ್ರೇತಾಯುಗದಿಂದಲೇ ಇರುವುದನ್ನು ಆದಿಪುರಾಣಗಳಲ್ಲಿಯೇ ಉಲ್ಲೇಖಿಸಿದೆ. ವರ್ಷಕೊಮ್ಮೆ ತುಲಾ ಸಂಕ್ರಮಣದಂದು ಕಾವೇರಿ ತೀರ್ಥರೂಪಿಣಿಯಾಗಿ ಆವೀರ್ಭವಿಸುವ ಸಂದರ್ಭ ಕೊಡವರಿಗೆ ಭಾವನಾತ್ಮಕ ಘಳಿಗೆಯಾಗಿದೆ. ಆದರೆ ಕೊಡಗು ಜಿಲ್ಲೆಯ ಕೆಲವು ಪಟ್ಟಭದ್ರ ಹಿತಾಶಕ್ತಿಗಳು ಕೊಡವರಿಗೆ ವರ್ಷಂಪ್ರತಿ ಈ ಸಂದರ್ಭದಲ್ಲಿ ಉಪಟಳ ನೀಡುತ್ತಿದೆ ಎಂದು ದೂರಿದ್ದಾರೆ.
ಮಂಗಳವಾರ ತೀರ್ಥೋಧ್ಬವಕ್ಕೆ ಸಂಬಂಧಿಸಿದಂತೆ ನಡೆದ ಪೂರ್ವಭಾವಿ ಸಭೆಗೆ, ಕೊಡವ ಸಮಾಜ ಹಾಗೂ ಕೊಡವ ನಾಯಕರನ್ನು ಆಹ್ವಾನಿಸಿರಲಿಲ್ಲ. ಆದರೂ ಸುಸೂತ್ರ ಉತ್ಸವ ಆಚರಣೆಯ ಉದ್ಧೇಶದಿಂದ ಸಭೆಯಲ್ಲಿ ಭಾಗವಹಿಸಿದ ಕೊಡವ ನಾಯಕರು ತಮ್ಮ ಅಭಿಪ್ರಾಯ ಸಲಹೆ ನೀಡಲು ಮುಂದಾಗಿದ್ದಾರೆ. ಈ ಸಂದರ್ಭ ಸಭೆಯ ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿಗಳು ಉದ್ಧಟತನದಿಂದ ಸಭೆಗೆ ಮಾಹಿತಿ ನೀಡದೆ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಹೊರನಡೆದಿದ್ದಾರೆ.
ಸಭೆಯ ವೇದಿಕೆಯಲ್ಲಿ ಉಪಸ್ಥಿತರಿದ್ದ ಭಾಗಮಂಡಲ ಗ್ರಾಮ ಪಂಚಾಯತಿ ಉಪಾಧ್ಯಕ್ಷರು ಫೋನಿನಲ್ಲಿ ಮಾತನಾಡುತ್ತಾ ಅಪರ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡುತ್ತಿದ್ದು, ಸಭೆಯನ್ನು ಮೊಟಕುಗೊಳಿಸಲು ಕೈಸನ್ನೆಯ ಮೂಲಕ ನಿರ್ದೇಶನ ನೀಡಿದಕ್ಕೆ ಪ್ರತ್ಯಕ್ಷ ಸಾಕ್ಷಿಗಳಿವೆ. ಈ ಹಿನ್ನೆಲೆ ನೈಜ ಭಕ್ತರಿಗೆ ಅವಮಾನ ಮಾಡಿದ ಅಪರ ಜಿಲ್ಲಾಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಜತೆಗೆ ಭಾಗಮಂಡಲ ಗ್ರಾಮ ಪಂಚಾಯತಿ ಉಪಾಧ್ಯಕ್ಷರ ಮೊಬೈಲನ್ನು ವಶಕ್ಕೆ ಪಡೆದು ತೆರೆಯ ಹಿಂದಿನಿಂದ ಸಭೆಗೆ ನಿರ್ದೇಶನ ನೀಡುತಿದ್ದವರು ಯಾರು ಎಂಬುದರ ಕುರಿತು ಸೂಕ್ತ ತನಿಖೆ ನಡೆಸಿ ನೈಜಾಂಶ ಬಹಿರಂಗ ಪಡಿಸಲು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಬೇಕೆಂದು ಪತ್ರದ ಮೂಲಕ ಸರ್ಕಾರವನ್ನು ಆಗ್ರಹಿಸಲಾಗಿದೆ ಎಂದು ತಿಳಿಸಿದ್ದಾರೆ.