ನಾಮಫಲಕಗಳಲ್ಲಿ ಕನ್ನಡ ಬಳಸದವರ ವಿರುದ್ಧ ಕ್ರಮಕೈಗೊಳ್ಳಿ

15 ckm 1
ನಾಮಫಲಕಗಳಲ್ಲಿ ಶೆ. 60ರಷ್ಟು ಕನ್ನಡ ಭಾಷೆ ಬಳಸದ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಎಸ್‌ಪಿ ವಿಕ್ರಮ ಅಮಟೆ ಅವರಿಗೆ ಕನ್ನಡ ಸೇನೆ ಕಾರ್ಯಕರ್ತರು ಮನವಿ ಸಲ್ಲಿಸಿದರು. ಪಿ.ಸಿ.ರಾಜೇಗೌಡ, ಜಯಪ್ರಕಾಶ್, ಶಂಕರೇಗೌಡ, ಹರೀಶ್ ಇತರರಿದ್ದರು.
Published on

ಚಿಕ್ಕಮಗಳೂರು: ಅಂಗಡಿ ಮುಂಗಟ್ಟುದಾರರು ನಾಮಫಲಕಗಳಲ್ಲಿ ಶೇ.60 ಕನ್ನಡ ಪದ ಬಳಕೆಗೆ ಸರ್ಕಾರ ಸೂಚಿಸಿದ್ದರೂ ಸಹ ನಿರ್ಲಕ್ಷ್ಯ ವಹಿಸಿರುವ ಮುಂಗಟ್ಟುದಾರರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಕನ್ನಡಸೇನೆ ಮುಖಂಡರು ಎಸ್‌ಪಿ ವಿಕ್ರಮ ಅಮಟೆ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ರಾಜ್ಯ ಸರ್ಕಾರ ಕನ್ನಡ ಭಾಷೆಗೆ ಆದ್ಯತೆ ನೀಡಿ ನಾಮಫಲಕಗಳಲ್ಲಿ ಶೇ.60 ಕನ್ನಡ ಹಾಗೂ ಶೇ.40 ಇತರೆ ಭಾಷೆ ಬಳಸುವಂತೆ ಸೂಚನೆ ನೀಡಿದೆ. ಆದರೆ ಚಿಕ್ಕಮಗಳೂರಿನ ಅಂಗಡಿ ಮಾಲೀಕರು ಸರ್ಕಾರದ ಆದೇಶ ಪಾಲಿಸುತ್ತಿಲ್ಲ ಎಂದು ದೂರಿದರು.
ನಾಮಫಲಕ ಸಂಬಂಧ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಹಾಗೂ ನಗರಸಭೆಗೆ ಮನವಿ ಸಲ್ಲಿಸಿದ ವೇಳೆ ಅಂಗಡಿ ಮಾಲೀಕರ ವಿರುದ್ಧ ಹೋರಾಟಗಾರರು ಕಾನೂನು ಮೀರದಂತೆ ಎಸ್‌ಪಿ ಗಮನಕ್ಕೆ ತರಬೇಕು ಎಂದು ಸೂಚಿಸಿದ್ದರಿಂದಾಗಿ ಇಂದು ಮನವಿ ಸಲ್ಲಿಸಲಾಗುತ್ತಿದೆ ಎಂದು ಹೇಳಿದರು.
ಎಸ್‌ಪಿ ವಿಕ್ರಮ ಅಮಟೆ ನಾಮಫಲಕ ವಿಷಯದಲ್ಲಿ ಎಚ್ಚೆತ್ತುಕೊಂಡು ಸರ್ಕಾರದ ಆದೇಶದಂತೆ ಜಿಲ್ಲೆಯ ಪ್ರತಿಯೊಂದು ಅಂಗಡಿಯ ಫಲಕಗಳನ್ನು ಬದಲಾವಣೆಗೆ ಮುಂದಾಗಬೇಕು. ವಿಳಂಬ ಧೋರಣೆ ಅನುಸರಿಸಿದರೆ ಕನ್ನಡಸೇನೆ ಬೀದಿಗಿಳಿದು ನಾಮಫಲಕಗಳಿಗೆ ಮಸಿ ಬಳಿಯುವ ಅಭಿಯಾನ ನಡೆಸಲಿದೆ. ಆ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ನಗರದಲ್ಲಿ ಯಾವುದಾದರು ಅನಾಹುತಗಳು ಸಂಭವಿಸುವ ಮೊದಲೇ ಪೊಲೀಸ್ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು. ಇನ್ನೆರಡು ದಿನಗಳಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ಅನಾಹುತಗಳಿಗೆ ಜಿಲ್ಲಾಡಳಿತವೇ ಹೊಣೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಕನ್ನಡಸೇನೆ ಆಟೋ ಘಟಕದ ಅಧ್ಯಕ್ಷ ಜಯಪ್ರಕಾಶ್, ಕಾರ್ಮಿಕ ಪಡೆ ಉಪಾಧ್ಯಕ್ಷ ಶಂಕರೇಗೌಡ, ಮುಖಂಡರಾದ ಹರೀಶ್, ಅನ್ವರ್, ಪಾಲಾಕ್ಷಿ, ರವಿ, ದೇವರಾಜ್, ಸತೀಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net