

ಮುಂಡಗೋಡ: ಸುಳ್ಳು ಮಾಹಿತಿ ನೀಡಿ ಪಟ್ಟಣದ ಗಾಂಧಿನಗರವನ್ನು ಕೊಳಚೆ ಪ್ರದೇಶವೆಂದು ಘೊಷಣೆ ಮಾಡಿಸಿರುವ ಬೆಳಗಾವಿ ಕೊಳಚೆ ನಿಮೂಲನೆ ಮಂಡಳಿ ಹಾಗೂ ಸ್ಥಳೀಯ ಪಟ್ಟಣ ಪಂಚಾಯಿತಿ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಗಾಂಧಿನಗರ ಅಭಿವೃದ್ಧಿ ಸಮಿತಿಯವರು ಪ್ರತಿಭಟನಾ ಮೆರವಣಿಗೆ ನಡೆಸಿ ಪಪಂ ಎದುರು ಶನಿವಾರ ಧರಣಿ ನಡೆಸಿದರು.
ಮುಂಡಗೋಡ ಸ.ನಂ. 186ರಲ್ಲಿ 25 ಎಕರೆ ಪ್ರದೇಶವೂ 1977ರಲ್ಲಿ ಕೆಜೆಪಿಯಾಗಿ ಗೆಜೆಟ್ ಆಗಿ ಅಭಿವೃದ್ಧಿ ಹೊಂದಿದ ಪ್ರದೇಶವಾಗಿದೆ. ಇಲ್ಲಿ ಎಲ್ಲ ಮೂಲ ಸೌಲಭ್ಯಗಳಿವೆ. ದೊಡ್ಡ ಕಟ್ಟಡಗಳು ಹಲವಾರು ವರ್ಷಗಳ ಹಿಂದೆಯೆ ನಿರ್ವಣವಾಗಿದ್ದು, ಗಾಂಧಿನಗರ ಅಭಿವೃದ್ಧಿ ಹೊಂದಿದ ಪ್ರದೇಶವಾಗಿದೆ. ಆದರೆ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಬೆಳಗಾವಿ ಕೊಳಚೆ ನಿಮೂಲನಾ ಮಂಡಳಿಯ ಅಧಿಕಾರಿಗಳು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ಅದರಲ್ಲಿ ಗಾಂಧಿನಗರವನ್ನು ಕೊಳಚೆ ಪ್ರದೇಶವೆಂದು ಘೊಷಣೆ ಮಾಡಿಸುವ ಮೂಲಕ ಕೊಳಚೆ ನಿಮೂಲನಾ ಮಂಡಳಿಯಿಂದ ವಸತಿ ಯೋಜನೆಯಡಿ ಮನೆಗಳನ್ನು ಮಂಜೂರಿ ಪಡೆದು ನಿರ್ವಿುಸಲಾಗಿದೆ ಎಂದು ಧರಣಿ ನಿರತರು ದೂರಿದರು.
ಕೊಳಚೆ ಪ್ರದೇಶವೆಂದು ಘೊಷಣೆ ಮಾಡಿರುವುದಕ್ಕೆ ಈ ಭಾಗದ ನೂರಾರು ಜನರ ವಿರೋಧವಿದ್ದು, ಈ ಕುರಿತು ನಾವು ನಿರಂತರವಾಗಿ ಹೋರಾಟ ಮಾಡುತ್ತಲೆ ಬಂದಿದ್ದೆವೆ. ಇದೀಗ ಜಿಲ್ಲಾಧಿಕಾರಿಗಳು ವಿಶೇಷ ತಂಡ ರಚನೆ ಮಾಡಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಆದೇಶ ಹೊರಡಿಸಿದ್ದಾರೆ. ಪರಿಶೀಲನೆ ತಂಡದವರು ಸ್ಥಳ ಪರಿಶೀಲಿಸಿ ವಾಸ್ತವ ವರದಿ ನೀಡಬೇಕು. ಸುಳ್ಳು ಮಾಹಿತಿ ನೀಡಿ ದಾಖಲಾತಿಗಳಲ್ಲಿ ಕೊಳಚೆ ಪ್ರದೇಶವನ್ನಾಗಿಸಿದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಪಟ್ಟಣ ಪಂಚಾಯಿತಿ ಎದುರು ಕೆಲ ಸಮಯ ಧರಣಿ ನಡೆಸಿ ಅಧಿಕಾರಿಗಳ ವಿರುದ್ಧ ಘೊಷಣೆ ಕೂಗಿದರು.
ಗಾಂಧಿನಗರ ಅಭಿವೃದ್ಧಿ ಸಮಿತಿಯ ವೆಂಕಟೇಶ ಶಿರಾಲಿ, ಎನ್.ಡಿ. ಕಿತ್ತೂರ, ರಮೇಶ ಮಳೆಕರ, ಶರತ ಬಾಡ್ಕರ, ವಿ.ಎಸ್. ವಿರಕ್ತಮಠ, ಪಿ.ಡಿ. ನಾಯ್ಕ, ವಿ.ಡಿ. ನಾಯ್ಕ, ಶ್ರೀಮಂತಪ್ಪ ಉಗ್ರಾಣ, ಫಕೀರಪ್ಪ ಚಲವಾದಿ ಸೇರಿ ನೂರಾರು ಜನರು ಪ್ರತಿಭಟನೆಯಲ್ಲಿದ್ದರು.