ದೌರ್ಜನ್ಯ ಎಸಗಿದ ಪೊಲೀಸರ ವಿರುದ್ಧ ಕ್ರಮಕೈಗೊಳ್ಳಿ

snd manavi
ಸಿಂಧನೂರಿನಲ್ಲಿ ಉಪತಹಸೀಲ್ದಾರ್ ಚಂದ್ರಶೇಖರ್‌ಗೆ ಸಿಪಿಐ(ಎಂಎಲ್) ಮಾಸ್‌ಲೈನ್ ತಾಲೂಕು ಸಮಿತಿ ಮನವಿ ಸಲ್ಲಿಸಿತು. ಜಿಲ್ಲಾ ಕಾರ್ಯದರ್ಶಿ ಬಿ.ಎನ್.ಯರದಿಹಾಳ, ಚಿಟ್ಟಿಬಾಬು, ರಮೇಶ ಪಾಟೀಲ್ ಬೇರ‌್ಗಿ, ಯಲ್ಲಪ್ಪ ಭಜಂತ್ರಿ ಇತರರಿದ್ದರು.
Published on

ಸಿಂಧನೂರು: ದೇವನಹಳ್ಳಿ ಹಾಗೂ ಚನ್ನರಾಯನಪಟ್ಟಣದಲ್ಲಿ ಭೂಸ್ವಾಧೀನ ವಿರೋಧಿಸಿ ನಡೆದ ದೇವನಹಳ್ಳಿ ಚಲೋ ಸಮಾವೇಶದಲ್ಲಿ ಚಳವಳಿ ಮುಂದಾಳುಗಳ ಮೇಲೆ ಪೊಲೀಸರು ನಡೆಸಿರುವ ದಬ್ಬಾಳಿಕೆ ಖಂಡಿಸಿ ಸಿಪಿಐ(ಎಂಎಲ್) ಮಾಸ್‌ಲೈನ್ ತಾಲೂಕು ಸಮಿತಿ ಗುರುವಾರ ಉಪತಹಸೀಲ್ದಾರ್ ಚಂದ್ರಶೇಖರಗೆ ಮನವಿ ಸಲ್ಲಿಸಿತು.

ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ 1777 ಎಕರೆ ಭೂಮಿಯನ್ನು ರಾಜ್ಯ ಸರ್ಕಾರ ಬಲವಂತದಿಂದ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ರೈತರು ಭೂಮಿ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದು ಬೆಂಬಲಕ್ಕೆ ಸಂಯುಕ್ತ ಹೋರಾಟ ಕರ್ನಾಟಕ ಜೂ.25ರಂದು ದೇವನಹಳ್ಳಿ ಚಲೋ ಕಾರ್ಯಕ್ರಮಕ್ಕೆ ಕರೆ ನೀಡಿದ್ದರು. ಈ ಹೋರಾಟದಲ್ಲಿ ಪಾಲ್ಗೊಂಡ 300 ಜನರನ್ನು ಪೊಲೀಸರು ಬಂಧಿಸಿರುವುದು ಖಂಡನೀಯ.

ಅಸಂಖ್ಯಾತ ರೈತ ಸಮುದಾಯವನ್ನು ಬೀದಿಪಾಲು ಮಾಡಲು ಹೊರಟಿರುವ ಸರ್ಕಾರದ ಕ್ರಮ ಸರಿಯಲ್ಲ. ದೌರ್ಜನ್ಯ ಎಸಗಿದ ಪೊಲೀಸರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು. ದೇವನಹಳ್ಳಿ, ಚನ್ನರಾಯಪಟ್ಟಣ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡಬೇಕೆಂದು ಒತ್ತಾಯಿಸಿದರು. ಜಿಲ್ಲಾ ಕಾರ್ಯದರ್ಶಿ ಬಿ.ಎನ್.ಯರದಿಹಾಳ, ಜಿಲ್ಲಾ ಸಮಿತಿ ಸದಸ್ಯರಾದ ಚಿಟ್ಟಿಬಾಬು, ರಮೇಶ ಪಾಟೀಲ್ ಬೇರ‌್ಗಿ, ತಾಲೂಕು ಕಾರ್ಯದರ್ಶಿ ಯಲ್ಲಪ್ಪ ಭಜಂತ್ರಿ, ತಿಮೋತಿ ಹಂಚಿನಾಳಕ್ಯಾಂಪ್, ರಂಗಪ್ಪ, ರಾಯಪ್ಪ, ರಾಜಪ್ಪ, ಸುವಾರ್ತಮ್ಮ, ಆಶೀರ್ವಾದಮ್ಮ, ಶಿವಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net