

ಚಿಕ್ಕಮಗಳೂರು: ಮೈಸೂರು ಪ್ರಾದೇಶಿಕ ಅರಣ್ಯ ವಿಭಾಗದಲ್ಲಿ ಸೆರೆಹಿಡಿದ ಮಾನವರೊಂದಿಗೆ ಸಂಘರ್ಷ ಹೊಂದಿದ್ದ ಹುಲಿಯನ್ನು ಮುತ್ತೋಡಿ ಅರಣ್ಯ ಪ್ರದೇಶಕ್ಕೆ ಬಿಟ್ಟಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ ಹೊಲದಗದ್ದೆ ಗಿರೀಶ್ ಒತ್ತಾಯಿಸಿದ್ದಾರೆ.
ಕೆಲವು ಪರಿಸರವಾದಿಗಳು ಹಾಗೂ ಅಧಿಕಾರಿಗಳ ಏಕ ಪಕ್ಷೀಯ ತೀರ್ಮಾನದಿಂದ ಹುಲಿಯನ್ನು ಮುತ್ತೋಡಿ ಅಭಯಾರಣ್ಯಕ್ಕೆ ಬಿಡಲಾಗಿದೆ. ಹುಲಿಯನ್ನು ಅಭಯಾರಣ್ಯಕ್ಕೆ ಬಿಡುವಾಗ ಸ್ಥಳೀಯ ಗ್ರಾಮಸ್ಥರಿಗೆ ಯಾವುದೇ ಮಾಹಿತಿ ನೀಡಿಲ್ಲ. ಜೊತೆಗೆ ಜನಪ್ರತಿನಿಧಿಗಳಿಗೂ ಮಾಹಿತಿ ಕೊಟ್ಟಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ತಮ್ಮ ಮನಸ್ಸಿಗೆ ತೋಚಿದಂತೆ ನಡೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಕಾಡಂಚಿನ ಜನ ಆತಂಕದಲ್ಲೇ ಬದುಕುವಂತಾಗಿದೆ ಎಂದು ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೇಲಿನ ಹುಲುವತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹುಲಿಯನ್ನು ಬಿಡಲಾಗಿದೆ. ಈಗಾಗಲೇ ಹುಲಿ ದಾಳಿಯಿಂದಾಗಿ ಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂರಾರು ಹಸುಗಳು ಮೃತಪಟ್ಟಿವೆ. ಮುಂದಿನ ದಿನಗಳಲ್ಲಿ ಹುಲಿ ಮನುಷ್ಯರ ಮೇಲೆಯೂ ದಾಳಿ ನಡೆಸುವ ಆತಂಕ ಸೃಷ್ಟಿಯಾಗಿದೆ ಎಂದು ತಿಳಿಸಿದ್ದಾರೆ.
ಮಾನವರೊಂದಿಗೆ ಸಂಘರ್ಷ ಹೊಂದಿದ್ದ ಹುಲಿಯನ್ನು ಯಾವ ಉz್ದೆÃಶಕ್ಕಾಗಿ ಭದ್ರಾ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು. ಹುಲಿಯನ್ನು ಬಿಡಲು ಅನುಮತಿ ಕೊಟ್ಟವರು ಯಾರು? ಹುಲಿಗೆ ರೇಡಿಯೋ ಕಾಲರ್ ಅಳವಡಿಕೆ ಮಾಡಿದವರು ಯಾರು? ಎಂಬುದನ್ನು ಕೂಡಲೇ ಸ್ಪಷ್ಟಪಡಿಸಬೇಕು. ಜೊತೆಗೆ ಹುಲಿಯನ್ನು ಸೆರೆ ಹಿಡಿದು ಬೇರೆ ಕಡೆ ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕಳೆದ ಮೂರು ನಾಲ್ಕು ವರ್ಷಗಳಿಂದ ಕಾಫಿ ತೋಟಗಳಲ್ಲಿ ಆನೆ ಮತ್ತು ಕಾಡುಕೋಣಗಳ ದಾಳಿ ವಿಪರೀತವಾಗಿದೆ. ಇದರಿಂದಾಗಿ ಬಾರಿ ಪ್ರಮಾಣದಲ್ಲಿ ಬೆಳೆ ಹಾನಿಯಾಗುತ್ತಿದೆ. ಉಪಟಳ ನೀಡುತ್ತಿರುವ ಆನೆಗಳನ್ನು ಸೆರೆಹಿಡಿದು ಬೇರೆ ಸ್ಥಳಾಂತರಿಸುವAತೆ ಹಲವು ಬಾರಿ ಮನವಿ ಮಾಡಿದರು ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆನೆ ದಾಳಿಯಿಂದ ಹೆದರಿದ ಕಾರ್ಮಿಕರು ಕಾಫಿ ತೋಟಕ್ಕೆ ಕೆಲಸಕ್ಕೆ ಬರುತ್ತಿಲ್ಲ. ಇದೀಗ ಮಾನವರೊಂದಿಗೆ ಸಂಘರ್ಷ ಹೊಂದಿದ್ದ ಹುಲಿಯನ್ನು ಈ ಭಾಗದಲ್ಲಿ ಬಿಡಲಾಗಿದೆ ಎಂದು ಗೊತ್ತಾದಲ್ಲಿ ಕಾರ್ಮಿಕರು ಯಾವುದೇ ಕಾರಣಕ್ಕೂ ಕೆಲಸಕ್ಕೆ ಬರುವುದಿಲ್ಲ. ಇದರಿಂದಾಗಿ ಬೆಳೆಗಾರರು ಸಂಪೂರ್ಣವಾಗಿ ಬೆಳೆ ಕಳೆದುಕೊಳ್ಳುವ ಸ್ಥಿತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ೫ ವರ್ಷಗಳ ಹಿಂದೆ ಮುತ್ತೋಡಿ ಅರಣ್ಯ ವ್ಯಾಪ್ತಿಯ ಪಂಡರವಳ್ಳಿ ಗ್ರಾಮದಲ್ಲಿ ನರಭಕ್ಷಕ ಹುಲಿಯೊಂದು ಮಹಿಳೆ ಮೇಲೆ ದಾಳಿ ಮಾಡಿ ಮಹಿಳೆ ಸಾವನ್ನಪ್ಪಿದ್ದನ್ನು ಜನ ಇನ್ನೂ ಮರೆತಿಲ್ಲ. ಆ ಹುಲಿಯನ್ನು ಗ್ರಾಮಸ್ಥರು ಒತ್ತಡದಿಂದ ಬೆಳಗಾವಿ ಸಮೀಪದ ಅರಣ್ಯಕ್ಕೆ ಸ್ಥಳಾಂತರಿಸಲಾಗಿತ್ತು. ಹೀಗಿರುವಾಗ ಮತ್ತೆ ಮನುಷ್ಯರೊಂದಿಗೆ ಸಂಘರ್ಷ ಹೊಂದಿರುವ ಹುಲಿಯನ್ನು ಇಲ್ಲಿ ತಂದು ಬಿಟ್ಟಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಮುತ್ತೂಡಿ ಅಭಯಾರಣ್ಯ ಪ್ರದೇಶದಲ್ಲಿರುವುದು ಶೋಲಾ ಅರಣ್ಯ. ಇಲ್ಲಿ ಬೇರೆಡೆಯಿಂದ ತಂದು ಬಿಟ್ಟ ಪ್ರಾಣಿಗಳು ಇಲ್ಲಿನ ಪರಿಸರಕ್ಕೆ ಹೊಂದಿಕೊAಡು ಬದುಕುವುದು ಕಷ್ಟ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ. ಒಂದೆಡೆ ಹುಲಿ ಯೋಜನೆ, ಮೀಸಲು ಅರಣ್ಯ ಪ್ರದೇಶ, ಡಿಮ್ಡ್ ಫಾರೆಸ್ಟ್ ಇನ್ನು ಮುಂತಾದ ಕಾರಣಗಳಿಂದ ಸ್ಥಳೀಯರನ್ನು ಒಕ್ಕಲಿಬ್ಬಿಸುವ ಹುನ್ನಾರ ನಡೆಸಲಾಗುತ್ತಿದೆಯೇ ಎಂಬ ಸಂಶಯವೂ ಮೂಡುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.