

ಜಮಖಂಡಿ: ಪತ್ರಕರ್ತನೆಂದು ಹೇಳಿಕೊಂಡು ಅಧಿಕಾರಿಗಳು, ಸರ್ಕಾರಿ ನೌಕರರನ್ನು ಬೆದರಿಸುತ್ತಿರುವ ಸಾವಳಗಿ ಗ್ರಾಮದ ಸದಾಶಿವ ಅಕ್ಕಿವಾಡ ಹಾಗೂ ಅವರ ತಾಯಿ, ಪತ್ನಿ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿ ಡಿಸಿ ಜಾನಕಿ ಕೆ. ಎಂ., ಎಸ್‌ಪಿ, ಎಎಸ್‌ಪಿ ಹಾಗೂ ಡಿವೈಎಸ್‌ಪಿಗೆ ಮನವಿ ಸಲ್ಲಿಸಿದರು.
ತಾನೊಬ್ಬ ಪತ್ರಕರ್ತನೆಂದು ಹೇಳಿಕೊಳ್ಳುವ ಸದಾಶಿವ ಅಕ್ಕಿವಾಡ ಹಾಗೂ ಅವರ ತಾಯಿ ಅಂಗನವಾಡಿ ಕಾರ್ಯಕರ್ತೆ ಗೌರವ್ವ ಭೂಪಾಲ ಅಕ್ಕಿವಾಡ ಮತ್ತು ಪತ್ನಿ ಅಶ್ವಿನಿ ಜತೆಗೆ ಇನ್ನಿಬ್ಬರು ಸೇರಿ ಬಾಗಲಕೋಟೆ, ವಿಜಯಪುರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿನ ಅಧಿಕಾರಿಗಳಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದಾರೆಂದು ಗ್ರಾಮಸ್ಥರು ಆರೋಪಿಸಿದರು.
ಲೋಕೋಪಯೋಗಿ, ಸಹಕಾರ, ಪಿಡಿಒ, ಹಾಸ್ಟೆಲ್‌ಗಳ ವಾರ್ಡನ್, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ, ಮೆಡಿಕಲ್‌ಗಳು, ವೈನ್‌ಶಾಪ್, ಗೊಬ್ಬರ ಅಂಗಡಿ, ಶಾಲೆ ಕಾಲೇಜು, ಧಾಬಾ ಹಾಗೂ ಗುತ್ತಿಗೆದಾರರರಿಗೆ ಸದಾಶಿವ ಅಕ್ಕಿವಾಡ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದಾರೆ. ಹಣ ನೀಡದಿದ್ದರೆ ಅವರ ಯಾವುದಾದರೂ ಒಂದು ವಿಷಯವನ್ನು ಮೇಲಧಿಕಾರಿಗಳ ವಾಟ್ಸ್ ಆ್ಯಪ್‌ಗೆ ಹಾಕಿ ಅವರ ಹೆಸರು ಹೇಳಿ ಬ್ಲಾೃಕ್‌ಮೇಲ್ ಮಾಡುತ್ತಿದ್ದಾರೆಂದು ದೂರಿದರು.
ಪ್ರಾಕ್ಷಿಕ ಪತ್ರಿಕೆಯ ಮುಖಪುಟದಲ್ಲಿ ಹಣ ನೀಡದ ಅಧಿಕಾರಿಗಳ ಫೋಟೊ ಹಾಕಿ ಅವರ ವಾಟ್ಸ್‌ಆ್ಯಪ್‌ಗೆ ಕಳಿಸುತ್ತಾರೆ. ಅವರು ಹಣ ನೀಡದಿದ್ದರೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಕಿರುಕುಳ ನೀಡುತ್ತಿದ್ದಾರೆ. ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಹಾಕಿ ಅಧಿಕಾರಿಗಳಿಗೆ ಹಣದ ಬೇಡಿಕೆ ಇಡುವುದು ಸಾಮಾನ್ಯವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪತ್ರಕರ್ತನೆಂದು ಹೇಳಿ ಬೆದರಿಕೆ ಹಾಕುತ್ತಿದ್ದಾರೆ. ಇದರಿಂದ ಈ ಭಾಗದಲ್ಲಿ ಅಧಿಕಾರಿಗಳು ನೌಕರಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಎಷ್ಟೋ ಜನ ಅಧಿಕಾರಿಗಳು ವರ್ಗ ಮಾಡಿಕೊಂಡು ಬೇರೆಡೆ ತೆರಳಿದ್ದಾರೆ. ಈಗಾಗಲೇ ಸದಾಶಿವ ಅಕ್ಕಿವಾಡ ಮೇಲೆ ಸಾವಳಗಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು.
ಗೌರವ್ವ ಅಕ್ಕಿವಾಡ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿದ್ದು, ಸರಿಯಾಗಿ ಅಂಗನವಾಡಿಗೂ ಹೋಗದೆ, ಮಕ್ಕಳಿಗೆ ಆಹಾರ ಪದಾರ್ಥಗಳನ್ನು ನೀಡದೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಪಾಲಕರು ಕೇಳಿದರೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಸರ್ಕಾರ ನೀಡುವ ಆಹಾರ ಪದಾರ್ಥಗಳನ್ನು ಮನೆಗೆ ಒಯ್ಯುತ್ತಿದ್ದಾರಲ್ಲದೆ, ಮಗ ಪತ್ರಕರ್ತನಿದ್ದಾನೆಂದು ಹೇಳಿ ಮೇಲಧಿಕಾರಿಗಳಿಗೆ ದಬ್ಬಾಳಿಕೆ ಹಾಕುತ್ತಿದ್ದಾರೆ. ಹೀಗಾಗಿ ಅವರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ಜಿಪಂ ಮಾಜಿ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ, ಜಿಪಂ ಮಾಜಿ ಸದಸ್ಯ ಸುರೇಶ ಮಾಳಿ, ಸುಜೀತಗೌಡ ಪಾಟೀಲ, ಬಸವರಾಜ ಪರಮಗೌಡ, ಭರತೇಶ ಕೌಟೇಕರ, ಸುರೇಶ ಯಕ್ಷಂಬೆ, ಅಪ್ಪುಗೌಡ ಪಾಟೀಲ, ಗಾಮೇಶ ಬಾಪಕರ, ತುಕಾ ಬಾಪಕರ, ಲಕ್ಷ್ಮಣ ಪುಂಡೆ, ರಾಜು ಶೇಗುಣಸಿ ಇತರರಿದ್ದರು.