

ಬೇಲೂರು: ಪುರಸಭೆ ಅಧಿಕಾರಿಗಳು ಬೀದಿ ಬದಿ ವ್ಯಾಪಾರಿಗಳನ್ನು ತೆರವು ಮಾಡಿದಂತೆ ಫುಟ್‌ಪಾತ್ ಆಕ್ರಮಿಸಿರುವ ಕೆಲ ಬಲಾಡ್ಯ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಕೂಡ್ಲೂರು ಅನೀಲ್‌ಗೌಡ ಹೇಳಿದರು.
3 ದಿನಗಳ ಹಿಂದೆ ಪುರಸಭೆ ಅಧಿಕಾರಿಗಳು ಪಟ್ಟಣದ ಬೀದಿ ಬದಿ ವ್ಯಾಪಾರಿಗಳನ್ನು ಬಡವರೆಂಬುದನ್ನು ನೋಡದೆ ಅವರ ಎಲ್ಲ ಪರಿಕರಗಳನ್ನು ತೆರವುಗೊಳಿಸಿದ್ದಾರೆ. ಆದರೆ ಪಟ್ಟಣದ ನೆಹರೂ ನಗರದಲ್ಲಿ ರಸ್ತೆಗೆ ಹೊಂದಿಕೊಂಡಂತಿರುವ ಕೋಳಿ ಅಂಗಡಿಗಳಿಂದ ವಾಹನ ಸಂಚಾರ ಮತ್ತು ಸ್ವಚ್ಛತೆೆಗೆ ಕಾರಣವಾಗುತ್ತಿದೆ. ಕೆಲ ಅಂಗಡಿಗಳ ವರ್ತಕರು ಫುಟ್‌ಪಾತ್‌ಗಳನ್ನು ಆಕ್ರಮಿಸಿ ವ್ಯಾಪಾರ ಮಾಡುತ್ತಿರುವುದು ಅಧಿಕಾರಿಗಳ ಕಣ್ಣಿಗೆ ಕಾಣುತ್ತಿಲ್ಲವೆ? ಎಂದು ಪ್ರಶ್ನಿಸಿದ ಅವರು, ಫುಟ್‌ಪಾತ್ ಅತಿಕ್ರಮಣ ತೆರವು ಮಾಡಿದರೆ ಪಾದಚಾರಿಗಳಿಗೆ ಅನುಕೂಲವಾಗುತ್ತದೆ. ಜತೆಗೆ ಇತ್ತೀಚೆಗೆ ಬೇಕಾಬಿಟ್ಟಿಯಾಗಿ ಪುರಸಭೆ ವಾಣಿಜ್ಯ ಮಳಿಗೆಗಳ ಹರಾಜು ಮಾಡಿದ್ದು, ಕೆಲ ಸದಸ್ಯರು ಮತ್ತು ಅಧಿಕಾರಿಗಳು ಮಳಿಗೆದಾರರೊಂದಿಗೆ ಶಾಮೀಲಾಗಿ ಹರಾಜು ಕೂಗಿದ ಬಿಡ್ಡುದಾರರಿಗೆ ಮಳಿಗೆಗಳನ್ನು ನೀಡಿಲ್ಲ. ಇದರ ಒಳಮರ್ಮವೇನು? ಕೂಡಲೇ ಅವರು ಕಟ್ಟಿರುವ ಹಣ ಮುಟ್ಟುಗೋಲು ಹಾಕಿ ಮರು ಟೆಂಡರ್ ಕರೆಯಬೇಕು. ಇಲ್ಲದಿದ್ದಲ್ಲಿ ಬಿಜೆಪಿ ಜಿಲ್ಲಾ ಯುವ ಮೋರ್ಚಾದಿಂದ ಜಿಲ್ಲಾಧಿಕಾರಿಗೆ ದೂರು ನೀಡಲಾಗುವುದು ಎಂದು ಎಚ್ಚರಿಸಿದರು.
ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸುಮನ್ ನವಿಲಹಳ್ಳಿ ಮಾತನಾಡಿ, ಪಾಕಿರ್ಂಗ್ ಹಾಗೂ ಸ್ವಚ್ಛತೆಗಾಗಿ ಟೆಂಟ್, ತಳ್ಳುಗಾಡಿ, ಗೂಡಂಗಡಿ ತೆರವುಗೊಳಿಸಿರುವುದು ಸ್ವಾಗತಾರ್ಹ. ಅದರೆ ವಾರಕ್ಕೊಮ್ಮೆ ನಡೆಯುವ ಸಂತೆಯಂದು ಸಾವಿರಾರು ವಿದ್ಯಾರ್ಥಿಗಳು ವಾಹನಗಳ ದಟ್ಟಣೆ ನಡುವೆ ದೇವಾಲಯದ ರಸ್ತೆಯಲ್ಲಿ ಬರಬೇಕು. ಆದರೆ ಇಲ್ಲಿನ ಅಂಗಡಿಯವರು ಫುಟ್‌ಪಾತ್ ಆಕ್ರಮಿಸಿಕೊಂಡು ವ್ಯಾಪಾರ ಮಾಡುವುದರಿಂದ ತೊಂದರೆಯಾಗುತ್ತಿದೆ. ಕೂಡಲೇ ಪುರಸಭೆಯವರು ಸಂತೆ ಒಳಭಾಗದಲ್ಲಿ ವ್ಯಾಪಾರಕ್ಕೆ ಅವಕಾಶ ಕೊಡಲಿ. ಇದಕ್ಕೆ ಒಂದು ವಾರದ ಗಡುವು ನೀಡುತ್ತಿದ್ದು, ಇದನ್ನು ಸರಿಪಡಿಸದಿದ್ದರೆ ಯುವ ಮೋರ್ಚಾದಿಂದ ಪ್ರತಿಭಟಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.