

ಚಿಕ್ಕಮಗಳೂರು: ಭೂ ಮಂಜೂರಾತಿ ಅಕ್ರಮದಲ್ಲಿ ಭಾಗಿಯಾಗಿರುವ ಕಂದಾಯ ಇಲಾಖೆ ಅಧಿಕಾರಿ ನೌಕರರ ಮೇಲೆ ತಕ್ಷಣ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲಿದಿದ್ದಲ್ಲಿ ೧೫ ದಿನಗಳ ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಡೂರು ಮತ್ತು ಮೂಡಿಗೆರೆ ತಾಲೂಕಿನಲ್ಲಿ ನಡೆದಿದ್ದ ಅಕ್ರಮ ಭೂ ಮಂಜೂರಾತಿ ಪ್ರಕರಣದ ತನಿಖೆಗೆ ೧೬ ಜನ ತಹಶೀಲ್ದಾರ್‌ಗಳನ್ನು ಕಳುಹಿಸಿ ತನಿಖೆ ನಡೆಸಿ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ. ಸರ್ಕಾರ ೯೫ ಜನ ನೌಕರರ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಸೂಚಿಸಿದೆ ಎಂದು ಹೇಳಿದರು.
ಅಕ್ರಮದಲ್ಲಿ ಭಾಗಿಯಾಗಿರುವ ಗ್ರಾಮ ಲೆಕ್ಕಾಧಿಕಾರಿಗಳು, ರಾಜಸ್ವ ನಿರೀಕ್ಷಕರು, ತಹಸೀಲ್ದಾರ್ ಇವರುಗಳ ವಿರುದ್ಧ ತಕ್ಷಣ ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಕಡೂರು ತಾಲೂಕು ಅಂದಿನ ತಹಸೀಲ್ದಾರ್ ಆಗಿದ್ದವರು ಉಳ್ಳಿನಾಗರು ಜಮೀನು ಅಕ್ರಮ ಖಾತೆ ಬದಲಾವಣೆ ಸಂಬAಧ ತರೀಕೆರೆ ಉಪ ವಿಭಾಗಾಧಿಕಾರಿಗಳು ಸಮಗ್ರ ತನಿಖೆ ನಡೆಸಿ ೩೨೪ ಅಕ್ರಮ ಭೂ ಮಂಜೂರಾತಿ ಮಾಡಿರುವ ಹಗರಣವನ್ನು ಪತ್ತೆಹಚ್ಚಿ ಎಫ್‌ಐಆರ್ ದಾಖಲಿಸಿದ್ದರು. ಅಂದಿನ ತಹಸೀಲ್ದಾರ್‌ಗೆ ಈಗ ಉಪ ವಿಭಾಗಾಧಿಕಾರಿಯಾಗಿ ಮುಂಬಡ್ತಿ ನೀಡಲಾಗಿದೆ. ಕೂಡಲೇ ಅವರಿಗೆ ಹಿಂಪಡೆಯಬೇಕು ಎಂದು ಹೇಳಿದರು.
ಕಡೂರು ಕಸಬಾ ಹೋಬಳಿ ಗ್ರಾಮ ಲೆಕ್ಕಾಧಿಕಾರಿಯಾಗಿದ್ದ ಮಂಜುನಾಥ ಅವರ ವಿರುದ್ಧ ಹಳ್ಳಿಕೆರೆ ಕಾವಲು ಭೂಮಿಯಲ್ಲಿ ೧೨೦೦ ಎಕರೆ ಜಮೀನನ್ನು ಅಕ್ರಮವಾಗಿ ಮಂಜೂರು ಮಾಡಿದ್ದು, ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದರು.
ಆದರೆ ಈ ವ್ಯಕ್ತಿಯನ್ನು ಕಡೂರು ಕ್ಷೇತ್ರದ ಶಾಸಕರು ಆಪ್ತ ಸಹಾಯಕರಾಗಿ ನೇಮಕ ಮಾಡಿಕೊಂಡಿರುವುದು ಸರಿಯಲ್ಲ. ಕೂಡಲೆ ಅವರನ್ನು ಆಪ್ತ ಸಹಾಯಕರ ಸ್ಥಾನದಿಂದ ತೆರವುಗೊಳಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ರೈತಸಂಘ ಒತ್ತಾಯಿಸುತ್ತದೆ ಎಂದರು.
ಈ ಅಕ್ರಮ ಭೂ ಹಗರಣದಲ್ಲಿ ಗುರುತಿಸಲಾಗಿರುವ ಅಧಿಕಾರಿಗಳ ವಿರುದ್ಧ ಇನ್ನು ೧೫ ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸುವ ಮೂಲಕ ತೀವ್ರ ಸ್ವರೂಪದ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಸುದ್ದಿಗೋಷ್ಟಿಯಲ್ಲಿ ರೈತ ಸಂಘದ ಮುಖಂಡರಾದ ಕೆ.ಟಿ ಆನಂದ್, ತಾಲೂಕು ಗೌರವಾಧ್ಯಕ್ಷ ಮಲ್ಲುಂಡಪ್ಪ, ತಾಲೂಕು ಪ್ರಧಾನ ಕಾರ್ಯದರ್ಶಿ ಎಚ್.ಡಿ ಉಮೇಶ್, ಮುಖಂಡರಾದ ಬಸವರಾಜ್, ದರ್ಶನ್ ಇದ್ದರು.