ಜಾತಿ ಕಿಚ್ಚು ಹಚ್ಚುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಿ: ಅಯ್ಯಂಡ್ರ ರಾಘವಯ್ಯ

gowda sanga
Published on

ಮಡಿಕೇರಿ: ಶಾಂತಿ, ಸಹಬಾಳ್ವೆಗೆ ಆದ್ಯತೆ ನೀಡುತ್ತಿರುವ ಗೌಡರನ್ನು ಗುರಿ ಮಾಡಿಕೊಂಡು ವಿನಾಕಾರಣ ಕೊಡವರು ಹಾಗೂ ಗೌಡರ ನಡುವೆ ಕಿಚ್ಚು ಹಚ್ಚುವ ಕೆಲಸವನ್ನು ಸಂಘಟನೆಯೊಂದು ಮಾಡುತ್ತಿದೆ ಎಂದು ಆರೋಪಿಸಿರುವ ಚೆಟ್ಟಳ್ಳಿಯ ಚೇರಳ ಗೌಡ ಸಂಘ, ಸಂಘಟನೆಯ ಅಧ್ಯಕ್ಷರು ಹಾಗೂ ಸಹಚರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೇರಳ ಗೌಡ ಸಂಘದ ಅಧ್ಯಕ್ಷ ಅಯ್ಯಂಡ್ರ ರಾಘವಯ್ಯ ಅವರು, ಕೊಡಗು ಜಿಲ್ಲೆಯ ಕಟ್ಟೆಮಾಡು ಗ್ರಾಮದ ಮಹಾಮೃತ್ಯುಂಜಯ ದೇವಸ್ಥಾನದ ವಾರ್ಷಿಕ ಪೂಜಾ ಕಾರ್ಯಕ್ರಮದ ಸಂದರ್ಭ ವಸ್ತ್ರ ಸಂಹಿತೆ ಕುರಿತು ಉಂಟಾದ ಕಲಹದಿಂದ ಜಿಲ್ಲೆಯಲ್ಲಿ ಸೂಕ್ಷ್ಮ ಪರಿಸ್ಥಿತಿ ಇದೆ. ಇದೇ ಸಂದರ್ಭದಲ್ಲಿ ಸ್ವಯಂ ಘೋಷಿತ ಸಂಘಟನೆಯ ಅಧ್ಯಕ್ಷರು ಹಾಗೂ ಸಹಚರರು ಜಿಲ್ಲೆಯಲ್ಲಿ ಗೌಡರು ಮತ್ತು ಕೊಡವರ ನಡುವೆ ಕಿಚ್ಚು ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಮೂಲ ಆಶಯದಂತೆ ಭಾರತೀಯರು ಭಾರತದ ಯಾವ ಭಾಗದಲ್ಲಿ ನೆಲೆಸಿದರೂ ಭಾರತೀಯರೇ ಆಗಿರುತ್ತಾರೆ ಹೊರತು ಪರಕೀಯರಲ್ಲ. ಗೌಡರನ್ನು ಹೊರಗಿನವರು ಎಂದು ಪ್ರತಿಬಿಂಬಿಸಿ ನಿಂದಿಸುತ್ತಿರುವುದು ಖಂಡನೀಯ. ಇದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ನಾವು ಸಹಬಾಳ್ವೆಗೆ ಆದ್ಯತೆ ನೀಡುತ್ತೇವೆಯೇ ಹೊರತು ವಿಷಬೀಜ ಬಿತ್ತುವ ಕೆಲಸ ಮಾಡುವುದಿಲ್ಲ. ಇನ್ನಾದರೂ ಕೊಡಗಿನ ಜನ ಒಗ್ಗಟ್ಟಾಗಿ ಕಿಚ್ಚು ಹಚ್ಚುವ ಸಂಘಟನೆಯ ವಿರುದ್ಧ ಜಾಗೃತರಾಗಬೇಕೆಂದು ಕರೆ ನೀಡಿದರು.

ಕಟ್ಟೆಮಾಡು ಮಹಾಮೃತ್ಯುಂಜಯ ಶ್ರೀ ಕ್ಷೇತ್ರದ ವಿಷಯವನ್ನು ನೆಪಮಾಡಿಕೊಂಡು ಗೌಡ ಜನಾಂಗವನ್ನು ದೂಷಣೆ ಮಾಡುವುದನ್ನು ನಾವು ಸಹಿಸುವುದಿಲ್ಲ. ಕೋವಿ ವಿಷಯಕ್ಕೆ ಸಂಬಂಧಿಸಿದಂತೆ ಹಾಗೂ ಸೈನಿಕರ ನಿಂದನೆಗೆ ಸಂಬಂಧಪಟ್ಟಂತೆ ಪ್ರತಿಯೊಂದು ವಿಷಯಗಳಲ್ಲಿ ಗೌಡ ಜನಾಂಗವನ್ನು ದೂಷಣೆ ಮಾಡುವುದು ಖಂಡನೀಯ. ಕೊಡಗಿನಲ್ಲಿ ವಿಷ ಬೀಜ ಬಿತ್ತಲು ಪ್ರಚೋದನೆ ನೀಡುತ್ತಿರುವವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಅವರನ್ನು ಗಡಿಪಾರು ಮಾಡಿದರೆ ಜಿಲ್ಲೆಯಲ್ಲಿ ಶಾಂತಿ ನೆಲೆಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಹೊಸಮನೆ ಟಿ.ಪೂವಯ್ಯ, ಕಾರ್ಯದರ್ಶಿ ಆಜೀರ ಧನಂಜಯ, ಉಪ ಕಾರ್ಯದರ್ಶಿ ಮರದಾಳು ಜನಾರ್ಧನ ಹಾಗೂ ಖಜಾಂಚಿ ಮುಕ್ಕಾಟಿ ಪಳಂಗಪ್ಪ, ಗೌಡ ಸಂಘದ ಉಪ ಖಜಾಂಚಿ ಪೇರಿಯನ ಉದಯ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net