

ಮೈಸೂರು: ವೃತ್ತಿ ಮಾಧ್ಯಮದಲ್ಲಿನ ಅಮಾನವೀಯತೆ, ಭ್ರಷ್ಟಾಚಾರ, ಅನೀತಿ, ತಾರತಮ್ಯ ಹೋಗಲಾಡಿಸಲು ವಚನಗಳ ಓದು ಮತ್ತು ಅಧ್ಯಯನ ಅಗತ್ಯ ಎಂದು ಮೈಸೂರು ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕ ಡಾ.ಡಿ.ಎಸ್.ಗುರು ಹೇಳಿದರು.
ಶರಣ ಸಾಹಿತ್ಯ ಪರಿಷತ್ ನಗರ ಘಟಕವು ಶನಿವಾರ ಶಿಕ್ಷಣ ಮಹಾವಿದ್ಯಾಲಯ ಆಲೂರು ವೆಂಕಟರಾವ್ ಭಾಷಾ ಕೌಶಲ ಸಂಸ್ಥೆಯಲ್ಲಿ ಏರ್ಪಡಿಸಿದ್ದ ವಚನ ವಾಚನ ವ್ಯಾಖ್ಯಾನ ಪ್ರಬಂಧ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ವಚನಗಳನ್ನು ಶಿಕ್ಷಕರು ತಪ್ಪದೆ ಓದಬೇಕು. ಹೊರ ಪ್ರಪಂಚದ ಅನುಭವಕ್ಕಾಗಿ ಹಾಗೂ ಅಂತರಂಗದ ಶುದ್ದಿಯ ಆನಂದದ ಅನುಭವಕ್ಕೆ ವಚನ ಮುಖ್ಯವೆಂದರು.
ಬಹುಮಾನ ವಿತರಿಸಿದ ಸಂಸ್ಥೆಯ ಪ್ರಾಂಶುಪಾಲೆ ಎಚ್.ಎನ್.ಗೀತಾಂಬಾ ಮಾತನಾಡಿ, ಕಾಯಕವೇ ಕೈಲಾಸ. ಯಾವ ವೃತ್ತಿಯಲ್ಲಿದ್ದೆವು, ಆ ವೃತ್ತಿಗೆ ದ್ರೋಹ ಬಗೆಯದೆ ಮಾಡುವ ಕಾರ್ಯವೇ ಧರ್ಮ. ಶಿಕ್ಷಕರಾದವರು ಎಲ್ಲ ವಿದ್ಯಾರ್ಥಿಗಳನ್ನು ಸಮಾನವಾಗಿ ಕಂಡು, ನಡೆದಂತೆ ನುಡಿದರೆ ಅದೇ ಸಾರ್ಥಕವೆಂದರು.
ಪರಿಷತ್ತಿನ ಅಧ್ಯಕ್ಷ ಮ.ಗು.ಸದಾನಂದಯ್ಯ ಅಧ್ಯಕ್ಷತೆ ವಹಿಸಿದ್ದರು. ದತ್ತಿ ದಾನಿಗಳಾದ ಪುಟ್ಟರಾಜಪ್ಪ, ಡಾ.ಎಸ್.ಬಿ.ಸೌಮ್ಯಾ ಇದ್ದರು.ಪ್ರಬಂಧ ಬರೆದ ಮತ್ತು ವಚನ ವಾಚನ ವ್ಯಾಖ್ಯಾನ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು.