

ಬೆಳಗಾವಿ: ನಾವು ದೇಶಕ್ಕಾಗಿ ಏನು ಮಾಡಿದ್ದೇವೆ ಎಂಬುದನ್ನು ಅವಲೋಕನ ಮಾಡಿ. ನಮಗೆ ದೇಶ ಏನು ಕೊಟ್ಟಿದೆ ಎಂಬುದನ್ನು ಯೋಚಿಸಬೇಡಿ. ದೇಶವು ಪ್ರಜೆಗಳಿಗಾಗಿ ಎಲ್ಲವನ್ನು ನೀಡುತ್ತಿದೆ. ಹಲವರ ತ್ಯಾಗ ಬಲಿದಾನಗಳ ಮೂಲಕ ನಮಗೆ ಸ್ವಾತಂತ್ರ್ಯ ಲಭಿಸಿದ್ದು, ಇಂದು ಅಭಿವೃದ್ದಿ ಪಥದಲ್ಲಿ ಸಾಗುತ್ತಿದ್ದೇವೆ ಎಂದು ಇನ್ಫೆಂಟ್ರಿ ಸ್ಕೂಲ್ ನ ಜೂನಿಯರ ಲೀಡರ್ಸ್ ವಿಂಗ್ ಕಮಾಂಡರ್ ಬ್ರಿಗೇಡಿಯರ್ ಕೆವಿಕೆ ಪ್ರಕಾಶ್ ಹೇಳಿದರು.
ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ 78ನೇ ಧ್ವಜಾರೋಹನ ನೆರವೇರಿಸಿ ಮಾತನಾಡಿದರು. ಅಂಡಮಾನ ನಿಕೋಬಾರನಲ್ಲಿರುವ ಯುದ್ದ ಹಾಗೂ ಸ್ವಾತಂತ್ರ್ಯ ಹೋರಾಟದ ಮೆಮೋರಿಯಲ್ ಮ್ಯೂಸಿಯಂಗೆ ಭೇಟಿ ನೀಡಿದರೆ ತ್ಯಾಗ ಬಲಿದಾನಗಳ ಕುರಿತು ನಮಗೆ ಅರಿವಿಗೆ ಬರುತ್ತದೆ. ಯುವಕರು ಮುಖ್ಯವಾಗಿ ಆ ವಸ್ತುಸಂಗ್ರಾಹಲಯಕ್ಕೆ ಭೇಟಿ ನೀಡಬೇಕು. ಅದರಿಂದ ಸ್ಪೂರ್ತಿ ಬರುತ್ತದೆ. ಆದ್ದರಿಂದ ಇತಿಹಾಸ ಅರಿತು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ಕಾಹೆರ್ ನ ಉಪಕುಲಪತಿ ಡಾ. ನಿತಿನ್ ಗಂಗಾನೆ ಮಾತನಾಡಿ, ಆಸ್ಪತ್ರೆಯಲ್ಲಿ ಸುರಕ್ಷಿತ ಪರಿಸರ ನಿರ್ಮಾಣಕ್ಕೆ ವಿಶ್ವವಿದ್ಯಾಲಯವು ಆರ್ಥಿಕ ನೆರವು ನೀಡುತ್ತದೆ. ಶೀಘ್ರದಲ್ಲಿಯೇ ಎನ್ಎಬಿಎಚ್ ಮಾನ್ಯತೆ ಲಭಿಸಲಿದ್ದು, ಆಸ್ಪತ್ರೆ ಅತ್ಯುತ್ತಮ ಸೇವೆ ನೀಡುತ್ತಿದೆ. ಮತ್ತಷ್ಟು ಸುಧಾರಿಸಲು ಸಹಕರಿಸಿ ಎಂದರು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಂ. ದಯಾನಂದ ಮಾತನಾಡಿ, ನಮ್ಮ ಸೇವೆಯನ್ನು ಇನ್ನೂ ಉತ್ತಮಗೊಳಿಸಲು ಎಲ್ಲ ಸಿಬ್ಬಂದಿ ಸಾಕಷ್ಟು ಸಹಕರಿಸಬೇಕಾಗುತ್ತದೆ. ಅದರಿಂದ ಆರೋಗ್ಯ ಮತ್ತು ನೈರ್ಮಲ್ಯ ಸೌಲಭ್ಯಗಳಿಗೆ ಆದ್ಯತೆ ನೀಡಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಸುಸ್ಥಿರ ಸಮತೋಲಿತ ಬೆಳವಣಿಗೆಗೆ ನಾವೆಲ್ಲರೂ ಕೈಜೋಡಿಸಬೇಕಾಗಿದೆ. ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರ ಆಶಯದಂತೆ ನಮ್ಮ ಸೇವೆಯನ್ನು ಇನ್ನೂ ಉತ್ತಮಗೊಳಿಸುತ್ತ, ನವ ಕರ್ನಾಟಕ, ನವಭಾರತ ಹಾಗೂ ಆಸ್ಪತ್ರೆಯನ್ನು ನವ ಆರೋಗ್ಯ ಧಾಮವನ್ನಾಗಿ ನಿರ್ಮಿಸೋಣ ಎಂದು ತಿಳಿಸಿದರು.
ಆಸ್ಪತ್ರೆಯು ಹೊರತರುವ ವಿಶೇಷ ಸಂಚಿಕೆ ಲೈಪ್‌ಲೈನ್ ಹಾಗೂ ಫೋಕಸ್ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಸಮಾರಂಭದಲ್ಲಿ ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎನ್ ಎಸ್ ಮಹಾಂತಶೆಟ್ಟಿ, ಡಾ. ವಿ.ಡಿ. ಪಾಟೀಲ, ಕಾಹೆರ ಕುಲಸಚಿವ ಡಾ. ಎಂ.ಎಸ್. ಗಣಾಚಾರಿ, ಕ್ಯಾನ್ಸರ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಂ.ವಿ. ಜಾಲಿ ಇತರರಿದ್ದರು.