

ಪಂಕಜ ಕೆ.ಎಂ. ಬೆಂಗಳೂರು
ಕೇಂದ್ರದಲ್ಲಿ ಇಂಡಿಯಾ ಮೈತ್ರಿ ಕೂಟ ಅಧಿಕಾರಕ್ಕೆ ಬಂದಲ್ಲಿ ನಿಮ್ಮ ಖಾತೆಗಳಿಗೆ ಮಾಸಿಕ 8,500 ರೂ. ‘ಟಕಾ ಟಕ್ ಟಕಾ ಟಕ್’ ಅಂತ ಹಣ ಬೀಳಲಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಮುಖಂಡ ರಾಹುಲ್ ಗಾಂಧಿ ಹೇಳಿದ್ದೇ ತಡ, ಅಂದಿನಿಂದ ಅಂಚೆ ಇಲಾಖೆಯಲ್ಲಿ ಖಾತೆ ತೆರೆಯಲು ಮಹಿಳೆಯರು ಮುಗಿ ಬೀಳುತ್ತಿದ್ದಾರೆ.
ಕಳೆದೊಂದು ತಿಂಗಳಿನಿಂದ ಶಕ್ತಿ ಕೇಂದ್ರ ವಿಧಾನಸೌಧಕ್ಕೆ ಸಮೀಪದಲ್ಲಿರುವ ನಗರದ ಪ್ರಧಾನ ಅಂಚೆ ಕಚೇರಿ (ಜಿಪಿಒ) ಎದುರು ಮುಂಜಾನೆ 3 ಗಂಟೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಡಿಜಿಟಲ್ ಖಾತೆ ತೆರೆಯುತ್ತಿದ್ದಾರೆ. ಮಹಿಳೆಯರ ಈ ಗುಂಪು ನಿಯಂತ್ರಿಸಲು ಅಂಚೆ ಇಲಾಖೆ ನಿತ್ಯ 500 ಮಂದಿಗೆ ಟೋಕನ್ ವಿತರಿಸುತ್ತಿದೆ.
ಹೆಚ್ಚುವರಿ ಸಿಬ್ಬಂದಿ ನಿಯೋಜನೆ: ಅಂಚೆ ಇಲಾಖೆಯಿಂದ ಯಾವುದೇ ನಗದು ಪ್ರೋತ್ಸಾಹಕ ಕಾರ್ಯಕ್ರಮ ಅಥವಾ ಉಪಕ್ರಮ ಘೋಷಿಸಿಲ್ಲ ಎಂದು ಕಚೇರಿಯ ಪ್ರವೇಶ ದ್ವಾರಗಳಲ್ಲಿ ಪೋಸ್ಟರ್‌ಗಳನ್ನು ಹಾಕಲಾಗಿದೆ. ಇದಲ್ಲದೆ ಕಚೇರಿಗೆ ಬರುತ್ತಿರುವ ಮಹಿಳೆಯರಿಗೆ ಅಂಚೆ ಅಧಿಕಾರಿಗಳು ಇಂತಹ ಯಾವುದೇ ಯೋಜನೆ ಜಾರಿಯಲ್ಲಿಲ್ಲ ಎಂದು ಎಷ್ಟೇ ಹೇಳಿದರೂ, ಅವರು ಕೇಳುವ ಸ್ಥಿತಿಯಲ್ಲಿಯೇ ಇಲ್ಲ. ಬದಲಿಗೆ ಖಾತೆ ತೆರೆದು ಕೊಡುವಂತೆ ಸಿಬ್ಬಂದಿ ಮೇಲೆ ಕೂಗಾಡುತ್ತಿದ್ದಾರೆ. ಹೀಗಾಗಿ ಹೊಸ ಖಾತೆ ತೆರೆಯಲು ಅನುಕೂಲವಾಗುವಂತೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗಿದೆ. ಜತೆಗೆ ಜನಸಂದಣಿ ನಿಯಂತ್ರಿಸಲು ಪೊಲೀಸರ ಸಹಾಯ ಕೇಳಲಾಗಿದೆ ಎಂದು ಜಿಪಿಒ ಮುಖ್ಯ ಪೋಸ್ಟ್ ಮಾಸ್ಟರ್ ಎಚ್.ಎಂ. ಮಂಜೇಶ್ ತಿಳಿಸಿದ್ದಾರೆ.
ಪ್ರಚಾರ ತಂದ ಅವಾಂತರ: ರಾಜ್ಯದಲ್ಲಿ ಏ.26ರಂದು 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆ ನಡೆಯುವ ಸಂದರ್ಭದಲ್ಲಿ ಮಹಿಳಾ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ‘ನ್ಯಾಯ ಯೋಜನೆ’ ಜಾರಿ ಭರವಸೆ ನೀಡಿತ್ತು. ಬಿಜೆಪಿ ಕೂಡ ತನ್ನ ಸಂಕಲ್ಪ ಪತ್ರದಲ್ಲಿ ‘ಮೋದಿ ಗ್ಯಾರಂಟಿ ಯೋಜನೆ’ ಬಗ್ಗೆ ಪ್ರಚಾರ ನಡೆಸಿತ್ತು. ಇದನ್ನೇ ಅಸವಾಗಿಟ್ಟುಕೊಂಡು ಕೆಲ ರಾಜಕೀಯ ಮುಖಂಡರು ಕೇಂದ್ರದ ನೆರವು ಪಡೆಯಲು ಅಂಚೆ ಕಚೇರಿಯಲ್ಲಿ ಖಾತೆ ತೆರೆಯಬೇಕು ಎಂದು ಹೇಳಿದ್ದರು. ಅಲ್ಲದೆ, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳು ಸಹ ಹರಿದಾಡುತ್ತಿದ್ದವು. ಇವೆಲ್ಲದರ ಪರಿಣಾಮ ಅಂಚೆ ಕಚೇರಿಯಲ್ಲಿ ಈ ಅವಾಂತರ ಸೃಷ್ಟಿಯಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ಖಾತೆ ತೆರೆಯಲು ಸೋಮವಾರ ಕೊನೆಯ ದಿನ ಎಂಬ ವದಂತಿ ಹಿನ್ನೆಲೆಯಲ್ಲಿ ಮಧ್ಯಾಹ್ನದ ವೇಳೆಗೆ 2 ಸಾವಿರಕ್ಕೂ ಅಧಿಕ ಮಹಿಳೆಯರು ಅಂಚೆ ಕಚೇರಿ ಎದುರು ಜಮಾಯಿಸಿ ನೂಕು ನುಗ್ಗಲು ಉಂಟಾಗಿತ್ತು. ಇವರನ್ನು ನಿಯಂತ್ರಿಸಲು ಸಿಬ್ಬಂದಿ ಹರಸಾಹಸ ಪಡೆಬೇಕಾಯಿತು. ಈ ಹಿಂದೆ ನಿತ್ಯ 100ರಿಂದ 200 ಖಾತೆಗಳನ್ನು ತೆರೆಯಲಾಗುತ್ತಿತ್ತು. ಅಲ್ಲದೆ, ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಡಿಜಿಟಲ್ ಖಾತೆಯನ್ನು ಇಲಾಖೆ ಸಿಬ್ಬಂದಿ ಮನೆ ಮನೆಗೆ ಹೋಗಿ ಮಾಡಿಸುತ್ತಿದ್ದರು. ಆದರೆ ಈ ವದಂತಿಯಿಂದಾಗಿ ಕೆಲ ದಿನಗಳಿಂದ ಜಿಪಿಒನಲ್ಲಿ ನಿತ್ಯ 700-800ರಂತೆ ಈ ಒಂದು ತಿಂಗಳಲ್ಲಿ 20 ಸಾವಿರಕ್ಕೂ ಅಧಿಕ ಖಾತೆ ತೆರೆಯಲಾಗಿದೆ ಎಂದು ಕಚೇರಿ ಸಿಬ್ಬಂದಿ ತಿಳಿಸಿದರು.
ರಾಗಾ ಘೋಷಣೆ ಪರಿಣಾಮ
ಲೋಕಸಭಾ ಚುನಾವಣೆ ಪ್ರಚಾರದ ವೇಳೆ ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ‘ಜೂ.4ರಂದು ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ, ಜು.5ರಂದು ದೇಶದ ಕೋಟ್ಯಂತರ ಕುಟುಂಬಗಳು ಬೆಳಗ್ಗೆ ಎದ್ದು ತಮ್ಮ ಬ್ಯಾಂಕ್ ಖಾತೆ ತೆರೆದು ನೋಡಿದರೆ 8,500 ರೂ. ಹಣ ಜಮೆ ಆಗಿರುತ್ತದೆ. ಈ ಹಣವನ್ನು ಇಂಡಿಯಾ ಮೈತ್ರಿ ಕೂಟ ಸರ್ಕಾರ ನಿಮ್ಮ ಖಾತೆಗೆ ಹಾಕಲಿದೆ. ಇದು ಕೇವಲ ಜುಲೈ ತಿಂಗಳಿಗೆ ಸೀಮಿತವಾಗದೆ ಮುಂದುವರಿಯಲಿದ್ದು, ಪ್ರತಿ ತಿಂಗಳು ‘ಟಕಾ ಟಕ್ ಟಕಾ ಟಕ್... ಎಂದು ಹಣ ನಿಮ್ಮ ಖಾತೆಗೆ ಬೀಳಲಿದೆ’ ಎಂದು ಘೋಷಿಸಿದ್ದೇ ತಡ, ಒಂದು ವರ್ಗದ ಮಹಿಳೆಯರು ಖಾತೆ ತೆರೆಯಲು ಅಂಚೆ ಇಲಾಖೆಯನ್ನು ಸುತ್ತುವರಿದಿದ್ದಾರೆ.