

ಕಾರವಾರ: ಕಡಪಾ ಕಲ್ಲು ಇಳಿಸುವಾಗ ತಲೆಯ ಮೇಲೆ ಬಿದ್ದು ಅಂಗಡಿಯ ಮಾಲೀಕ ಮೃತಪಟ್ಟ ಘಟನೆ ತಾಲೂಕಿನ ಅಸ್ನೋಟಿ ಕೊಳಗೆ ಸಮೀಪ ಗುರುವಾರ ನಡೆದಿದೆ.
ನಗರದ ನಿವಾಸಿ, ಅಸ್ನೋಟಿ ಕೊಳಗೆಯಲ್ಲಿರುವ ಮಲ್ಲಿಕಾರ್ಜುನ ಟೈಲ್ಸ್ ಆ್ಯಂಡ್ ಸಿರಾಮಿಕ್ಸ್ ಮಾಲೀಕ ಮುದ್ದಣ್ಣ ಹನುಮಂತಪ್ಪ ಹಾಲುಂಡಿ(52) ಮೃತರು. ಮಾಜಾಳಿಯ ತಮ್ಮ ಸಿರಾಮಿಕ್ಸ್ ಅಂಗಡಿಯಲ್ಲಿ ಲಾರಿಯಿಂದ ಬೃಹತ್ ಟೈಲ್ಸ್ ಇಳಿಸುವಾಗ ಜಾರಿ ಅವರ ತಲೆಯ ಮೇಲೆ ಬಿದ್ದಿತ್ತು. ಘಟನೆಯಲ್ಲಿ ಇನ್ನೊಬ್ಬ ಕಾರ್ಮಿಕನಿಗೆ ಅಲ್ಪ ಗಾಯವಾಗಿದೆ ಎನ್ನಲಾಗಿದೆ.
ಮೂಲತಃ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನಿಲುಗಲ್ ಮೂಲದ ಅವರು ಹಲವು ವರ್ಷಗಳಿಂದ ಕಾರವಾರದಲ್ಲಿ ನೆಲೆಸಿದ್ದರು. ಕಾರವಾರ ತಾಲೂಕು ಉಪ್ಪಾರ ಸಮುದಾಯ ಸಂಘಟನೆಯ ಅಧ್ಯಕ್ಷರಾಗಿದ್ದರು. ಬಿಜೆಪಿ ಸದಸ್ಯರಾಗಿದ್ದರು. ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮೃತರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.