

ಮಂಗಳೂರು: ಟೈಲರ್‌ಗಳ ಕ್ಷೇಮ ನಿಧಿ ಮಂಡಳಿ ರಚನೆ, ಭವಿಷ್ಯನಿಧಿ ಪಿಂಚಣಿ ಯೋಜನೆ, ಆರೋಗ್ಯ ವಿಮೆ, 60 ವರ್ಷದ ಬಳಿಕ ಮಾಸಿಕ 3 ಸಾವಿರ ರೂ. ನಿವೃತ್ತಿ ವೇತನ ಮೊದಲಾದ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರಾಜ್ಯ ಟೈಲರ್ಸ್ ಅಸೋಸಿಯೇಶನ್ ನೇತೃತ್ವದಲ್ಲಿ ಮಂಗಳವಾರ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಮತ್ತು ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಹೊಲಿಗೆ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ ಸುಮಾರು 10 ಲಕ್ಷಕ್ಕೂ ಅಧಿಕ ಟೈಲರ್‌ಗಳ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿರುವುದನ್ನು ಖಂಡಿಸಿ, ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಶನ್ (ಕೆಎಸ್‌ಟಿಎ) ನೇತೃತ್ವದಲ್ಲಿ ರಾಜ್ಯಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆದಿದೆ.
ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ರಚಿಸುವಂತೆ ಕಳೆದ 23 ವರ್ಷಗಳಿಂದ ಶಾಂತ ರೀತಿಯ ಹೋರಾಟ ಮತ್ತು ಹಲವಾರು ಮನವಿಗಳನ್ನು ಸಲ್ಲಿಸಿದರೂ ಬೇಡಿಕೆಗಳು ಈಡೇರಿಲ್ಲ. ಎಲ್ಲ ಬೇಡಿಕೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಕುಮಾರ್, ಜಿಲ್ಲಾಧ್ಯಕ್ಷ ಜಯಂತ್ ಉರ್ಲಾಂಡಿ, ಪ್ರಧಾನ ಕಾರ್ಯದರ್ಶಿ ಲಿಗೋಧರ್, ಕೋಶಾಧಿಕಾರಿ ಈಶ್ವರ ಕುಲಾಲ್ ಉಪಸ್ಥಿತರಿದ್ದರು.