

ಉಡುಪಿ : ರಾಜ್ಯದಲ್ಲಿ ಸುಮಾರು 10 ಲಕ್ಷ ಹೊಲಿಗೆ ಕೆಲಸಗಾರರಿಗೆ ಜೀವನ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಟೈಲರ್ ಕ್ಷೇಮನಿಧಿ ಮಂಡಳಿಯನ್ನು ರಚಿಸಬೇಕು. 15 ದಿನದೊಳಗೆ ಬೇಡಿಕೆ ಈಡೇರದಿದ್ದರೆ ಜಿಲ್ಲಾಧಿಕಾರಿಗಳ ಕಛೇರಿ ಮುಂದೆಯೇ ಮಿಷಿನ್ ಇಟ್ಟು ಬಟ್ಟೆ ಹೊಲಿಯುತ್ತೇವೆ ಎಂದು ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಶನ್ ಸಂಘಟನಾ ಕಾರ್ಯದರ್ಶಿ ಅಬ್ದುಲ್ ಖಾದರ್ ಎಚ್ಚರಿಸಿದ್ದಾರೆ.
ಮಂಗಳವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಅಸಂಘಟಿತ ಕಾರ್ಮಿಕ-ಸಾಮಾಜಿಕ ಭದ್ರತಾ ಮಂಡಳಿ ಮೂಲಕ ಟೈಲರ್ ವೃತ್ತಿಬಾಂಧವರ ಬೇಡಿಕೆ ಈಡೇರಿಸಬೇಕು. ಮುಖ್ಯವಾಗಿ ಭವಿಷ್ಯನಿಧಿ ಯೋಜನೆ ಹಾಗೂ 60 ವರ್ಷ ತುಂಬಿದ ಟೈಲರ್ ಗಳಿಗೆ ಮಾಸಿಕ ಪಿಂಚಣಿ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಸಮಿತಿ ಕೋಶಾಧಿಕಾರಿ ಕೆ. ರಾಮಚಂದ್ರ, ಜಿಲ್ಲಾಧ್ಯಕ್ಷ ಗುರುರಾಜ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಪಾಲನ್, ಉಡುಪಿ ಟೈಲರ್ ಸಹಕಾರ ಸಂಘದ ಅಧ್ಯಕ್ಷ ದಯಾನಂದ ಕೋಟ್ಯಾನ್, ಪದಾಧಿಕಾರಿಗಳಾದ ಶಾಂತಾ ಬಸ್ರುರು, ಹೇಮಾ ಉಪಸ್ಥಿತರಿದ್ದರು.
2000ಕ್ಕೂ ಮಿಕ್ಕಿದ ಟೈಲರ್ ಗಳು ಪ್ರತಿಭಟನೆ ಅಂಗವಾಗಿ ಮಣಿಪಾಲ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು.