

ಉಡುಪಿ : ಅಸಂಘಟಿತ ಕಾರ್ಮಿಕ-ಸಾಮಾಜಿಕ ಭದ್ರತಾ ಮಂಡಳಿ ಮೂಲಕ ಟೈಲರ್ ವೃತ್ತಿಬಾಂಧವರ ಬೇಡಿಕೆ ಈಡೇರಿಸಬೇಕು. ಮುಖ್ಯವಾಗಿ ಭವಿಷ್ಯನಿಧಿ ಯೋಜನೆ ಹಾಗೂ 60 ವರ್ಷ ತುಂಬಿದ ಟೈಲರ್ ಗಳಿಗೆ ಮಾಸಿಕ ಪಿಂಚಣಿ ಜಾರಿ ಮಾಡಬೇಕು ಎಂದು ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಶನ್ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಸಮಿತಿ ಕೋಶಾಧಿಕಾರಿ ಕೆ. ರಾಮಚಂದ್ರ, ರಾಜ್ಯದಲ್ಲಿ ಸುಮಾರು 10 ಲಕ್ಷ ಹೊಲಿಗೆ ಕೆಲಸಗಾರರಿಗೆ ಜೀವನ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಟೈಲರ್ ಕ್ಷೇಮನಿಧಿ ಮಂಡಳಿಯನ್ನು ರಚಿಸಬೇಕು ಎಂದು 23 ವರ್ಷಗಳಿಂದ ಮನವಿ ಸಲ್ಲಿಸಲಾಗುತ್ತಿದೆ. ಆದರೆ ಯಾವುದೇ ಸರಕಾರಗಳು ನಮ್ಮ ಬೇಡಿಕೆಯನ್ನು ಈಡೇರಿಸುತ್ತಿಲ್ಲ. ಹೀಗಾಗಿ ಜಿಲ್ಲಾ 26ರಂದು ರಾಜ್ಯವ್ಯಾಪಿ ಪ್ರತಿಭಟನೆ ನಿರ್ಧರಿಸಲಾಗಿದೆ. ಮುಂದಿನ 15 ದಿನಗಳೊಳಗೆ ಬೇಡಿಕೆ ಈಡೇರಿಸದಿದ್ದರೆ ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಉಡುಪಿಯಲ್ಲಿ ಪ್ರತಿಭಟನೆ ಅಂಗವಾಗಿ 26ರಂದು ಬೆಳಗ್ಗೆ ಗಂಟೆ 10ಕ್ಕೆ ಮಣಿಪಾಲ ಬಸ್ ನಿಲ್ದಾಣದಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೆರಿವರೆಗೆ ತೆರಳಿ, ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಜಿಲ್ಲಾಧ್ಯಕ್ಷ ಗುರುರಾಜ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಪಾಲನ್, ಉಡುಪಿ ಟೈಲರ್ ಸಹಕಾರ ಸಂಘದ ಅಧ್ಯಕ್ಷ ದಯಾನಂದ ಕೋಟ್ಯಾನ್, ಪದಾಧಿಕಾರಿಗಳಾದ ಶಾಂತ ಬಸ್ರುರು, ಹೇಮಾ ಉಪಸ್ಥಿತರಿದ್ದರು.