ಟೇಲರ್‌ಗಳ ಬೇಡಿಕೆ ಈಡೇರಿಕೆಗೆ ಪಟ್ಟು, ರಾಜ್ಯ ಟೇಲರ್ ಅಸೋಸಿಯೇಷನ್ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ

26 dhl Tailors Horata News ph 4
Published on

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ರಾಜ್ಯದಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ಮಹಿಳೆಯರು ಮತ್ತು ಪುರುಷರು ಹೊಲಿಗೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಸಮುದಾಯ ಆರ್ಥಿಕವಾಗಿ ಸದೃಢಗೊಳ್ಳಲು ಸರ್ಕಾರ ಟೇಲರ್ಸ್‌ ಕ್ಷೇಮನಿಧಿ ಮಂಡಳಿ ರಚಿಸಬೇಕು ಎಂದು ಆಗ್ರಹಿಸಿ ರಾಜ್ಯ ಟೇಲರ್ ಅಸೋಸಿಯೇಷನ್ ಜಿಲ್ಲಾ ಸಮಿತಿಯಿಂದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.


ದೊಡ್ಡಬಳ್ಳಾಪುರ ಟೇಲರ್ಸ್‌ ಸಮಿತಿ ಅಧ್ಯಕ್ಷ ಕೆ.ಎಸ್. ಚಂದ್ರು ಮಾತನಾಡಿ, ರಾಜ್ಯ ಸರ್ಕಾರವು ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ರಚಿಸಿರುವುದನ್ನು ಸ್ವಾಗತಿಸುತ್ತೇವೆ. ಆದರೆ ಹೊಲಿಗೆ ಯಂತ್ರದ ಮೂಲಕ ಬದುಕು ಕಟ್ಟಿಕೊಂಡಿರುವ ಹಲವಾರು ಟೇಲರ್‌ಗಳಿಗೆ ಯಾವುದೇ ಭದ್ರತೆ ಇಲ್ಲ. ಪ್ರಮುಖ ಬೇಡಿಕೆಗಳಾದ ಭವಿಷ್ಯನಿಧಿ ಹಾಗೂ 60 ವರ್ಷ ತುಂಬಿದ ಡೇಲರ್‌ಗಳಿಗೆ ಮಾಸಿಕ ಪಿಂಚಣಿ ನೀಡುವಂತಾಗಬೇಕು ಎಂದರು.


ಪ್ರಧಾನ ಕಾರ್ಯದರ್ಶಿ ಪಿ.ಎಸ್. ವಾಮನರಾವ್ ಮಾತನಾಡಿ, ಸರ್ಕಾರಕ್ಕೆ 7 ಪ್ರಮುಖ ಬೇಡಿಕೆ ಸಲ್ಲಿಸಲಾಗಿದೆ. ಮುಖ್ಯಮಂತ್ರಿಗಳು ಟೇಲರ್ ಕ್ಷೇಮ ನಿಧಿ ಮಂಡಳಿ ರಚಿಸಿ, ಭವಿಷ್ಯ ನಿಧಿ ಮತ್ತು ಮಾಸಿಕ ಪಿಂಚಣಿ ಯೋಜನೆ ಜಾರಿಗೊಳಿಸುತ್ತಾರೆಂಬ ಭರವಸೆ ಇದೆ ಎಂದರು.


ಸಂಘದ ಪದಾಧಿಕಾರಿಗಳಾದ ಹೊಸಕೋಟೆ ರಾಧಮ್ಮ, ಚಂದ್ರಶೇಖರ್, ಎನ್. ಶೋಭಾ, ದೇವನಹಳ್ಳಿಯ ಟೇಲರ್ ಬಾಬು, ಕುಮಾರ್, ವೆಂಕಟೇಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net