ನ್ಯಾಯಬೆಲೆ ಅಂಗಡಿಗಳಿಗೆ ತಹಸೀಲ್ದಾರ್ ಭೇಟಿ

visit
Published on

ಪಡುಬಿದ್ರಿ: ಕಾಪು ತಾಲೂಕಿನ ಕಟಪಾಡಿ, ಕೋಟೆ, ಮಟ್ಟು ಮತ್ತು ಇನ್ನಂಜೆ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಿಗೆ ತಹಸೀಲ್ದಾರ್ ಪ್ರತಿಭಾ ಆರ್. ಶುಕ್ರವಾರ ಅನಿರೀಕ್ಷಿತ ಭೇಟಿ ನೀಡಿ ಪಡಿತರ ವಿತರಣೆ ಪರಿಶೀಲಿಸಿದರು.

ತೂಕದ ಅಳತೆ ಸರಿಯಾಗಿದೆಯೇ, ತೂಕ ಮತ್ತು ಅಳತೆ ಇಲಾಖೆಯಿಂದ ಮುದ್ರೆ ಆಗಿರುವುದರ ಬಗ್ಗೆ ಖಚಿತಪಡಿಸಿಕೊಳ್ಳಲಾಯಿತು. ವಿತರಿಸುತ್ತಿದ್ದ ಅಕ್ಕಿ ಗುಣಮಟ್ಟ ಖಚಿತಪಡಿಸಿಕೊಂಡರು. ವಿತರಿಸುವ ಸ್ಥಳದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ತಿಳಿಸಿದರು. ನೆರೆದಿದ್ದ ಗ್ರಾಹಕರೊಂದಿಗೆ ಸಂವಾದ ನಡೆಸಿದ ತಹಸೀಲ್ದಾರ್, ಸಮಯಪಾಲನೆ ಸೂಕ್ತವಾಗಿ ಮಾಡಲು ನಿರ್ದೇಶನ ನೀಡಿದರು. ನ್ಯಾಯಬೆಲೆ ಅಂಗಡಿಗಳ ಉಸ್ತುವಾರಿಗಳು ಗ್ರಾಹಕರಿಗೆ ಉತ್ತಮ ಸೇವೆ ನೀಡಬೇಕು. ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಸಮಯ ಪಾಲನೆ ಮಾಡಬೇಕು. ತೂಕ ಸರಿಯಾಗಿರಬೇಕು ಎಂದು ತಾಕೀತು ಮಾಡಿದರು.

ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ 28 ಮತ್ತು ಪುರಸಭೆ ವ್ಯಾಪ್ತಿಯಲ್ಲಿ 4 ಸೇರಿ 32 ನ್ಯಾಯಬೆಲೆ ಅಂಗಡಿಗಳಿವೆ. ಎಲ್ಲ ಅಂಗಡಿಗಳು ಸುವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಲು ನಿರ್ದೇಶಿಸಿ, ಏನಾದರೂ ದೂರು ಇದ್ದರೆ ಸಾರ್ವಜನಿಕರು ನೇರವಾಗಿ ತಹಸೀಲ್ದಾರ್ ಅವರನ್ನು ಸಂಪರ್ಕಿಸುವಂತೆ ಸಲಹೆ ನೀಡಿದರು. ಆಹಾರ ನಿರೀಕ್ಷಕ ಲೀಲಾನಂದ್ ತಪಾಸಣೆಯಲ್ಲಿ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net