ಕಂದಾಯ ಉಪ ಗ್ರಾಮಗಳಾಗಿ ಮೇಲ್ದರ್ಜೆ

27myk2
Published on

ಮಾಯಕೊಂಡ: ಮಾಯಕೊಂಡ ಹೋಬಳಿಯ ವಿವಿಧ ಗ್ರಾಮಗಳಿಗೆ ಮಂಗಳವಾರ ತಹಸೀಲ್ದಾರ್ ಡಾ.ಎಂ.ಬಿ. ಅಶ್ವಥ್ ಭೇಟಿ ನೀಡಿ ಕಂದಾಯ ಉಪ ಗ್ರಾಮಗಳನ್ನಾಗಿಸಲು ಸ್ಥಳ ಪರಿಶೀಲಿಸಿದರು.

ದೊಡ್ಡಮಾಗಡಿ ಸಮೀಪದ ಲಂಬಾಣಿ ತಾಂಡಾ, ಚಿಕ್ಕತೊಗಲೇರಿ, ಅತ್ತಿಗೆರೆ, ರಾಮಗೊಂಡನಹಳ್ಳಿ ಗ್ರಾಮಗಳ ಎಕೆ ಕಾಲನಿಗಳನ್ನು ಕಂದಾಯ ಉಪ ಗ್ರಾಮಗಳಾಗಿ ಮಾರ್ಪಾಡು ಮಾಡಲು ಅಧಿಕಾರಿಗಳು ಕಾಲನಿ ನಿವಾಸಿಗಳೊಂದಿಗೆ ಚರ್ಚೆ ನಡೆಸಿದರು.

ಈ ವೇಳೆ ತಹಸೀಲ್ದಾರ್ ಡಾ.ಎಂ.ಬಿ. ಅಶ್ವಥ್ ಮಾತನಾಡಿ, ಸರ್ಕಾರಿ ಗೋಮಾಳಗಳಲ್ಲಿ ಕಂದಾಯ ಸರ್ವೆ ನಂಬರ್ ಜಮೀನುಗಳಲ್ಲಿ ಮನೆ ನಿರ್ವಿುಸಿಕೊಂಡ ಅಥವಾ ಗ್ರಾಪಂನಿಂದ ಈ ಸ್ವತ್ತು ಪಡೆಯದ ಮನೆಗಳಿಗೆ ಹಕ್ಕು ಪತ್ರ ನೀಡಲು ಪರಿಶೀಲನೆ ನಡೆಸಲಾಗುತ್ತಿದೆ ಎಂದರು.

ಕೆಲವು ಗ್ರಾಮಗಳಲ್ಲಿ ಎಕೆ ಕಾಲನಿ ನಿವಾಸಿಗಳಿಗೆ ಮತ್ತು ತಾಂಡಗಳ ನಿವಾಸಿಗಳಿಗೆ ಹಕ್ಕು ಪತ್ರ ನೀಡಿರುವುದಿಲ್ಲ. ಅಂಥವರನ್ನು ಹುಡುಕಿ ಹಕ್ಕು ಪತ್ರ ನೀಡುವುದರೊಂದಿಗೆ ಪ್ರತ್ಯೇಕ ಉಪ ಗ್ರಾಮಗಳನ್ನಾಗಿ ಮಾಡಲಾಗುತ್ತದೆ ಎಂದು ತಿಳಿಸಿದರು.

ಅತ್ತಿಗೆರೆ, ರಾಮಗೊಂಡನಹಳ್ಳಿ ಮತ್ತು ಚಿಕ್ಕತೊಗಲೇರಿ ಎಕೆ ಕಾಲನಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಗ್ರಾಮಾಡಳಿತ ಅಧಿಕಾರಿ, ರಾಜಸ್ವ ನಿರೀಕ್ಷಕರು ವರದಿ ತಯಾರಿಸಿ ಕಚೇರಿಗೆ ಕಳಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ವೇಳೆ ರಾಜಸ್ವ ನಿರೀಕ್ಷಕ ಹಿರೇ ಗೌಡ್ರು, ಅತ್ತಿಗೆರೆ ಗ್ರಾಪಂ ಪಿಡಿಒ ಶೈಲಜಾ, ಕಾರ್ಯದರ್ಶಿ ಸಿದ್ದನಗೌಡ, ಗ್ರಾಮಾಡಳಿತ ಅಧಿಕಾರಿ ಮಂಜುನಾಥ್ ಮತ್ತು ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net