ದಾಸಿಮಯ್ಯನವರ ವಚನ ಇಂದಿನ ಕಾಲಘಟ್ಟಕ್ಕೂ ಅನ್ವಯ

03 jlr2
Published on

ಜಗಳೂರು: ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ದಾಸಿಮಯ್ಯರ ವಚನಗಳ ಕೊಡುಗೆ ಮಹತ್ತರವಾದುದು. ಅವರ ವಚನಗಳ ಅರ್ಥ, ಭಾವನೆ ಹಾಗೂ ಆಲೋಚನೆಗಳು ಇಂದಿನ ಕಾಲಘಟ್ಟಕ್ಕೂ ಅನ್ವಯವಾಗುವಂತದ್ದು ಎಂದು ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ ಹೇಳಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ಬುಧವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಹಮ್ಮಿಕೊಂಡಿದ್ದ ದೇವರ ದಾಸಿಮಯ್ಯ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ದೇವರ ದಾಸಿಮಯ್ಯ 11 ನೇ ಶತಮಾನದ ಪ್ರಥಮ ವಚನಕಾರ ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಇವರನ್ನು ದೇವರ ದಾಸಿಮಯ್ಯ, ಜೇಡರ ದಾಸಿಮಯ್ಯ ಎಂದು ಎರಡು ರೀತಿಯಲ್ಲಿ ಗುರುತಿಸಲಾಗುತ್ತದೆ. ವೃತ್ತಿಯಲ್ಲಿ ನೆಯ್ಗೆಕಾರನಾದ ದಾಸಿಮಯ್ಯನವರು ಶಿವನಿಗೆ ಬಟ್ಟೆಯನ್ನು ಕೊಟ್ಟು ಅಪೂರ್ವಭಕ್ತಿ ಮೆರೆದಂತೆ ಐತಿಹ್ಯ ಪುರಾಣಗಳಲ್ಲಿ ಉಲ್ಲೇಖಗಳು ಸಿಗುತ್ತವೆ. ದುಗ್ಗಲೆಯೆಂಬ ಶರಣೆಯೊಂದಿಗೆ ಸಂಸಾರಿಯೂ ಆಗಿದ್ದ ಜೇಡರ ದಾಸಿಮಯ್ಯರನ್ನೇ ಮೊದಲ ವಚನಕಾರರೆಂದು ಗುರುತಿಸಲಾಗುತ್ತದೆ ಎಂದರು.

ವಕೀಲ ಸಣ್ಣಓಬಯ್ಯ ಮಾತನಾಡಿ, ದೇವರ ದಾಸಿಮಯ್ಯನವರು ಗುರುಕುಲದಲ್ಲಿ ಅಪಾರ ವಿದ್ಯೆಯೊಂದಿಗೆ ಉತ್ತಮ ಸಂಸ್ಕಾರವನ್ನು ಪಡೆದು ಜ್ಞಾನವಂತರಾದರು. ದಾಸಿಮಯ್ಯನವರು ಯಾವುದನ್ನೂ ಪ್ರಶ್ನಿಸದೆ ಸ್ವೀಕರಿಸುವ ಮನೋಭಾವದವರಲ್ಲ. ಪ್ರಖರ ವೈಚಾರಿಕ ನೆಲೆಗಟ್ಟಿನ ಅಸದೃಶ ವ್ಯಕ್ತಿತ್ವವನ್ನು ಹೊಂದಿದವರಾಗಿದ್ದರು. ಇಂತಹ ವಚನಕಾರರ ಆದರ್ಶಗುಣಗಳನ್ನು ಇಂದಿನ ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಉಪ ತಹಸೀಲ್ದಾರ್ ಮಂಜಾನಂದ, ಸಮಾಜ ಕಲ್ಯಾಣಾಧಿಕಾರಿ ಪರಮೇಶ್ವರಪ್ಪ, ಅರಣ್ಯಾಧಿಕಾರಿ ಮಹೇಶ್ವರಪ್ಪ, ಕಸಾಪ ಮಾಜಿ ತಾಲೂಕು ಅಧ್ಯಕ್ಷ ಹಜರತ್ ಅಲಿ, ಉಪನೋಂದಾಣಾಧಿಕಾರಿ ಬಷೀರ್ ಅಹಮದ್, ದಸಂಸ ಸಂಚಾಲಕ ಮಲೆಮಾಚಿಕೆರೆ ಸತೀಶ್, ನಿಲಯಪಾಲಕಿ ಮಂಗಳಮ್ಮ, ಚಿಕ್ಕಣ್ಣ ಸೇರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net